ದೆಹಲಿ: ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಕ್ರೇನಿಯಾ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ದ್ವಿಪಕ್ಷೀಯ ಸಭೆಯ ಸಾಧ್ಯತೆಯನ್ನು ಭಾರತ ಮತ್ತು ಉಕ್ರೇನ್ನ ಹಿರಿಯ ರಾಜತಾಂತ್ರಿಕರು ಎದುರು ನೋಡುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಒಂದು ವೇಳೆ ಸಭೆ ನಡೆದರೆ, ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಉಭಯ ನಾಯಕರ ನಡುವಿನ ಮೊದಲ ಸಭೆ ಇದಾಗಲಿದೆ. ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಜಿ7 ಶೃಂಗಸಭೆಯಲ್ಲಿ ಮೂರು ಸೆಷನ್ಗಳಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮೇ 19ರಂದು ಜಪಾನ್ ತಲುಪಿದ್ದಾರೆ. ಅಲ್ಲಿಂದ ಅವರು ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಹೋಗಲಿದ್ದಾರೆ.
ಇಂದು ಮೋದಿ ಮತ್ತು ಝೆಲೆನ್ಸ್ಕಿ ಭೇಟಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದು ಅದರ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭಿಸಿಲ್ಲ. ಪ್ರಸ್ತಾಪವನ್ನು ಅಂತಿಮಗೊಳಿಸಲು ಎರಡೂ ಕಡೆಯವರು ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ವರದಿ ಹೇಳಿದೆ.
ಪ್ರಬಲ ಗುಂಪಿನ ಪ್ರಸ್ತುತ ಅಧ್ಯಕ್ಷ ಜಪಾನ್ನ ಆಹ್ವಾನದ ಮೇರಿಗೆ ಉಕ್ರೇನಿಯನ್ ಅಧ್ಯಕ್ಷರು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಉಕ್ರೇನ್ನ ಮೊದಲ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ಸಂದರ್ಭದಲ್ಲಿ ಮಾತನಾಡಿ ಝಪರೋವಾ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಪತ್ರವನ್ನು ಹಸ್ತಾಂತರಿಸಿದರು. ಅಧ್ಯಕ್ಷ ಝೆಲೆನ್ಸ್ಕಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.