ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕುರಿತ ದಾಖಲೆ ಒದಗಿಸುವಂತೆ ಸೂಚಿಸಿರುವ ಸುಪ್ರೀಂ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗುಜರಾತ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಿಳಿಸಿವೆ. ಆದರೆ ಈ ನಡೆಯನ್ನು ನ್ಯಾ. ಕೆ.ಎಂ ಜೋಸೆಫ್ ಹಾಗೂ ನ್ಯಾ ಬಿ.ವಿ ನಾಗರತ್ನ ಅವರ ಪೀಠವು ತೀವ್ರವಾಗಿ ಖಂಡಿಸಿದೆ.
ಇದೊಂದು ಗಂಭೀರ ಪ್ರಕರಣ. ಓರ್ವ ಗರ್ಭಿಣಿ ಮೇಲೆ ಸಾಮೂಹಿಕ ಆತ್ಯಾಚಾರ ಎಸಗಿದ್ದಲ್ಲದೇ ಆಕೆಯ 7 ಜನ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿದೆ. ಇದನ್ನು ಸಾಮಾನ್ಯ ಕೊಲೆ ಪ್ರಕರಣ ರೀತಿ ಪರಿಗಣಿಸಬೇಡಿ. ಅದೊಂದು ಹತ್ಯಾಕಾಂಡ. ಇಂದು ಬಿಲ್ಕಿಸ್, ನಾಳೆ ನೀವು, ನಾವು ಅಥವಾ ಯಾರೇ ಆಗಿರಬಹುದು. ಈ ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಕಾರಣಗಳ ಎಲ್ಲ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ನಾವು ನಮ್ಮದೇ ಆದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ’ ಎಂದು ಸರ್ಕಾರಗಳನ್ನು ಎಚ್ಚರಿಸಿದೆ.
ಅಪರಾಧಿಗಳಿಗೆ ಕ್ಷಮಾದಾನ (amnesty) ಏಕೆ ನೀಡಲಾಗಿದೆ ಹಾಗೂ ಯಾವ ಕ್ರಮಗಳನ್ನು, ಮಾನದಂಡಗಳನ್ನು ಅನುಸರಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಮಗೆ ಒದಗಿಸುವಂತೆ ಸರ್ಕಾರಗಳಿಗೆ ಮಾ.27 ರಂದು ಸುಪ್ರೀಂ ಸೂಚಿಸಿತ್ತು. ಆದರೆ ತಮಗೆ ಕ್ಷಮಾದಾನ ನೀಡುವ ಅಧಿಕಾರವಿದೆಯಾದ್ದರಿಂದ ಯಾವುದೇ ದಾಖಲೆಗಳನ್ನು ಒದಗಿಸಲ್ಲ ಹಾಗೂ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸರ್ಕಾರಗಳು ತಿಳಿಸಿವೆ. ಹೀಗಾಗಿ ಸರ್ಕಾರಗಳನ್ನು ಸುಪ್ರೀಂ (Supreme court) ತೀವ್ರ ತರಾಟೆ ತೆಗೆದುಕೊಂಡಿದೆ.
ಗೋಧ್ರಾ ಹತ್ಯಾಕಾಂಡದ (Godhra massacre) ಬಳಿಕ ನಡೆದ ಗಲಭೆಯಲ್ಲಿ 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ ಆಕೆಯ 3 ವರ್ಷದ ಮಗಳು ಸೇರಿದಂತೆ 7 ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜೈಲು ಸೇರಿದ್ದ 11 ಜನ ಅಪರಾಧಿಗಳಿಗೆ ಸರ್ಕಾರಗಳು ಕ್ಷಮಾದಾನ ನೀಡಿ, ಶಿಕ್ಷೆಯನ್ನು ರದ್ದುಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಿದ್ದವು. ಆದರೆ ಅಕಾಲಿಕ ಬಿಡುಗಡೆಯ ಸರ್ಕಾರದ ಕ್ರಮ ಪ್ರಶ್ನಿಸಿ ಬಿಲ್ಕಿಸ್ (Bilkis Banu) ಸುಪ್ರೀಂ ಮೆಟ್ಟಿಲೇರಿದ್ದಳು.