ಮಂಗಳೂರು: ರಾಜ್ಯದಲ್ಲಿ ಇನ್ನೂ ಮಳೆ ಬಿರುಸು ಪಡೆದಿಲ್ಲ. ಆದರೆ ಕರಾವಳಿಯಲ್ಲಿ ಬಿಪರ್ಜಾಯ್ ಚಂಡಮಾರುತದ (Biparjoy Cyclone) ಅಬ್ಬರಕ್ಕೆ ಕಡಲ್ಕೊರೆತ ತೀವ್ರಗೊಂಡಿದೆ. ಮಳೆ ಬರುವುದಕ್ಕೆ ಮೊದಲೇ ಚಂಡಮಾರುತ ಕಾಣಿಸಿದ್ದರಿಂದ ಕಡಲು ಅಬ್ಬರಿಸತೊಡಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ತಳ್ಳುತ್ತಿದ್ದಾರೆ.
ಅರಬ್ಬೀ ಸಮುದ್ರದಲ್ಲಿ (Arabian Sea) ಎದ್ದಿರುವ ಚಂಡಮಾರುತದ ಪರಿಣಾಮ ಕಡಲು ಮಾತ್ರ ಭೋರ್ಗರೆಯುತ್ತ ಬರುತ್ತಿದ್ದು ರಕ್ಕಸ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದಾಗಿ ಮಂಗಳೂರು (Mangaluru) ಹೊರವಲಯದ ಉಳ್ಳಾಲದ ಬಟ್ಟಂಪಾಡಿ, ಉಚ್ಚಿಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ತೀರದಲ್ಲಿರುವ ಮನೆಗಳು ಸಮುದ್ರ ಸೇರುತ್ತಿವೆ. ನೂರಾರು ತೆಂಗಿನ ಮರಗಳು ಧರಾಶಾಯಿ ಆಗಿದ್ದು ತೀರ ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಈ ಭಾಗದಲ್ಲಿ ಕಡಲ್ಕೊರೆತ ಪ್ರತಿ ಬಾರಿ ಕಾಣಿಸಿಕೊಳ್ಳುವ ಸಮಸ್ಯೆ. ಮಳೆ ಜೋರಾದರೆ, ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಕಾಣಿಸಿಕೊಂಡರೆ, ಕರಾವಳಿಯ ಕೆಲವು ಪ್ರದೇಶಗಳು ಟಾರ್ಗೆಟ್ ಆಗುತ್ತವೆ. ಕಡಲ ರಾಜನ ಅಬ್ಬರಕ್ಕೆ ಭೂಪ್ರದೇಶ ಕೊಚ್ಚಿ ಹೋಗುತ್ತಿದ್ದು, ಅಲ್ಲಿನ ಮನೆಗಳು ಸಮುದ್ರಕ್ಕೆ ಆಹುತಿಯಾಗುತ್ತವೆ. ಈ ಸಮಸ್ಯೆಗೆ ಪ್ರತಿ ಬಾರಿ ರಾಜಕಾರಣಿಗಳು ಶಾಶ್ವತ ಕಾಮಗಾರಿಯ ಭರವಸೆ ನೀಡಿದರೂ, ಅದು ಭರವಸೆಗಷ್ಟೇ ಸೀಮಿತವಾಗಿವೆ.
ಕಳೆದ ಬಾರಿಯೂ ಮೀನುಗಾರಿಕೆ ಸಚಿವರಾಗಿದ್ದ ಎಸ್. ಅಂಗಾರ ಕೇರಳದ ಮಾದರಿ ಶಾಶ್ವತ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದರು. ಆದರೆ ಕಾಮಗಾರಿಗೆ ಅನುದಾನವನ್ನೇ ಬಿಡುಗಡೆ ಮಾಡಿರಲಿಲ್ಲ. ಇದೀಗ ರಾಜ್ಯದಲ್ಲಿ ಸರಕಾರ ಬದಲಾಗಿದ್ದು, ಮತ್ತೆ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಆಗಬೇಕು ಇಲ್ಲವೇ ಈ ಭಾಗದ ಜನರನ್ನು ಸ್ಥಳಾಂತರಿಸಿ ಪುನರ್ವಸತಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಒಂದೆಡೆ ಕಡಲು ಆಕ್ರಮಿಸಿಕೊಂಡು ಬರುತ್ತಿದ್ದರೆ, ಮತ್ತೊಂದೆಡೆ ಕಡಲಿಗೆ ಕಲ್ಲು ಹಾಕುವ ಕೆಲಸ ನಡೆಯುತ್ತಲೇ ಇದೆ. ಈ ರೀತಿ ಕಲ್ಲುಗಳನ್ನು ಸುರಿದರೆ, ಅದು ಪೂರ್ತಿಯಾಗಿ ಕಡಲಿನ ಒಳ ಸೇರುತ್ತವೆ. ಹತ್ತಾರು ವರ್ಷಗಳಿಂದಲೂ ಇದೇ ರೀತಿ ಆಗಿರುವುದರಿಂದ ಜನರು ಇಂತಹ ಅರೆಬರೆ ಕಾಮಗಾರಿಯ ನಾಟಕ ಬೇಡ ಎನ್ನುತ್ತಾರೆ. ಒಟ್ಟಿನಲ್ಲಿ ಮಳೆ ಬಿರುಸು ಪಡೆಯುವ ಮೊದಲೇ ಈ ರೀತಿಯ ಸನ್ನಿವೇಶ ಸೃಷ್ಟಿಯಾಗಿದ್ದು ಇನ್ನು ಮಳೆ ಜೋರಾದಲ್ಲಿ ಪರಿಸ್ಥಿತಿ ಹೇಗಿರಬಹುದು ಎನ್ನುವ ಆತಂಕ ಸ್ಥಳೀಯರಲ್ಲಿದೆ.