ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲು ನಿಲ್ದಾಣಕ್ಕೆ ಇಂದಿಗೆ 153 ವರ್ಷಗಳ ಇತಿಹಾಸ. ರೈಲ್ವೆ ವಿಭಾಗದ ಅಧಿಕಾರಿಗಳು ಹಾಗೂ ನಿವೃತ್ತ ರೈಲ್ವೆ ಅಧಿಕಾರಿಗಳು ಕೇಕ್ ಕಟ್ ಮಾಡಿ, ಸಂಭ್ರಮಾಚರಣೆ ನಡೆಸಿದರು. ಬೆಂಗಳೂರಿನಲ್ಲಿ (Bengaluru) ರೈಲ್ವೆ ವೈಭವದ 153 ವರ್ಷಗಳ ಇತಿಹಾಸವನ್ನ ಸಾರ್ವಜನಿಕರಿಗೆ ತಿಳಿಸಲು ನೈರುತ್ಯ ರೈಲ್ವೆಯಿಂದ, ರೈಲು ನಿಲ್ದಾಣ ಮಹೋತ್ಸವ ಆಚರಿಸಲಾಯಿತು.
KSR ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ರು. ಹಲವು ವರ್ಷಗಳಿಂದ KSR ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿದ ನೌಕರರು ಕೂಡ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡರು.
ಬೆಂಗಳೂರಿಗೆ ಆಗಸ್ಟ್ 1, 1864 ರಲ್ಲಿ ಬಂದ ಮೊದಲ ರೈಲಿನಿಂದ ಹಿಡಿದು, ನಗರದಿಂದ ಯಾವೆಲ್ಲ ಪ್ರದೇಶಗಳಿಗೆ ರೈಲು ಮಾರ್ಗ ವಿಸ್ತರಿಸಿತು, ನಗರದ ಪ್ರಗತಿಗೆ ರೈಲು ಸೇವೆ ಹೇಗೆ ಸಹಾಯವಾಯ್ತು ಹಾಗೂ ಹಂತ ಹಂತವಾಗಿ ಬೆಳವಣಿಗೆಯ ಮೈಲಿಗಲ್ಲಿನ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಯಿತು.