ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕೆಲವು ಹಾಲಿ ಸಂಸದರಿಗೆ ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದಾಗಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ಸುಳಿವನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಎರಡು ದಿನಗಳ ಕಾಲ ದೆಹಲಿಯಲ್ಲಿ ಸಭೆ ನಡೆಸಲಾಗಿದೆ. ಒಂದು ಸುತ್ತಿನ ಮಾತುಕತೆ ನಡೆದಿದೆ.
ಸಭೆಯಲ್ಲಿ ರಾಜ್ಯ ಕೋರ್ ಕಮಿಟಿ ಕಳಿಸಿದ್ದ ಪಟ್ಟಿ ಬಗ್ಗೆ ಚರ್ಚೆ ಆಗಿದೆ. ಸವಿಸ್ತಾರವಾಗಿ ಅಮಿತ್ ಶಾ, ನಡ್ಡಾ, ಸಂತೋಷ್ ಅವರ ಜೊತೆ ಚರ್ಚೆ ಆಗಿದೆ ಎಂದರು. ಹೈಕಮಾಂಡ್ ನಾಯಕರಿಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಹೈಕಮಾಂಡ್ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರಿಗೆ ಟಿಕೆಟ್ ಯಾರಿಗೆ ಇಲ್ಲ ಅನ್ನೋದು ಮುಖ್ಯ ಅಲ್ಲ. ಯಾರಿಗೆ ಕೊಟ್ಟರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು.