ಕೋಲ್ಕತ್ತಾ: 2ನೇ ಹಂತದ ಚುನಾವಣೆ ದಿನವೇ ಸಂದೇಶ್ಖಾಲಿಯಲ್ಲಿ (Sandeshkhali) ಸಿಬಿಐ ದಾಳಿ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿರುವ ಟಿಎಂಸಿ (TMC), ತನಿಖಾ ಸಂಸ್ಥೆ ವಿರುದ್ಧವೇ ದೂರು ನೀಡಿದೆ. ಸಿಬಿಐ ಕಾರ್ಯಚರಣೆಯನ್ನೇ ಮಮತಾ ಪ್ರಶ್ನಿಸಿದ್ದಾರೆ. ಅಧಿಕಾರಿಗಳೇ ಶಸ್ತ್ರಾಸ್ತ್ರಗಳನ್ನು ತಂದಿಟ್ಟು ಆರೋಪ ಮಾಡುತ್ತಿರಬಹುದು ಈ ಬಗ್ಗೆ ನಮಗೆ ಅನುಮಾನವಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದ್ರೆ, ಟಿಎಂಸಿಯನ್ನು ಭಯೋತ್ಪಾದಕ ಸಂಘಟನೆಗೆ ಹೋಲಿಸಿರುವ ಬಿಜೆಪಿ, ಮಮತಾ ಬ್ಯಾನರ್ಜಿಯನ್ನು (Mamata Banerjee) ಬಂಧಿಸಿ ಎಂದು ಆಗ್ರಹಿಸಿದೆ.
ಇದೇ ಹೊತ್ತಲ್ಲಿ, ಹೆಲಿಕಾಪ್ಟರ್ ಹತ್ತುವಾಗ ಸಿಎಂ ಮಮತಾ ಎಡವಿಬಿದ್ದ ಘಟನೆ ದುರ್ಗಾಪುರದಲ್ಲಿ ನಡೆದಿದೆ. ಸಿಎಂಗೆ ಸಣ್ಣ ಗಾಯವಾಗಿದೆ. ಮತ್ತೊಂದು ಕಡೆ, ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಬಿಷ್ಣೋಪುರದ ಭದ್ರತಾ ಪಡೆಗಳ ಶಿಬಿರದ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ ಮಿಲಿಟೆಂಟ್ಗಳು ಸತತ 2 ಗಂಟೆಗಳ ಕಾಲ ಗುಂಡಿನ ಮಳೆಗರೆದಿದ್ದಾರೆ. ಬಾಂಬ್ಗಳನ್ನು ಕೂಡ ಎಸೆದಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಹಿಂಸಾಚಾರದ ವೇಳೆ ಸಿಆರ್ಪಿಎಫ್ ಯೋಧರು ಸಹ ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸಿಆರ್ಪಿಎಫ್ ಹಾಗೂ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 26ರಂದು ಸಂದೇಶ್ ಖಾಲಿಯಲ್ಲಿ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳ ತಂಡ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಹಾಗೂ ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು.