ಬೆಂಗಳೂರು: ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಮೂಲದಲ್ಲಿಯೇ ಇದೆ ಎಂಬ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ (State Congress)ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ನರೇಂದ್ರ ಮೋದಿ ಅವರೇ, ನೆರೆ, ಕರೋನಾದಂತಹ ಸಂದರ್ಭದಲ್ಲಿ ಕನ್ನಡಿಗರ ಕಡೆ ತಿರುಗಿಯೂ ನೋಡದವರು ಈಗ ಚುನಾವಣೆಗೆ ಬಂದಿದ್ದೀರಿ, ಸಂತೋಷ. ನಿಮ್ಮ ಟೆಲಿಪ್ರಾಂಪ್ಟರ್ನಲ್ಲಿ ಬಿಜೆಪಿ ಸರ್ಕಾರದ ಒಂದೇ ಒಂದು ಸಾಧನೆ ಬಗ್ಗೆ ಮಾತಿಲ್ಲವೇಕೆ? ಡಬಲ್ ಇಂಜಿನ್ ಯೋಜನೆ ಬಗ್ಗೆ ಚಕಾರವಿಲ್ಲ ಏಕೆ? ಮುಂದಿನ ಜನಹಿತದ ದೃಷ್ಟಿಕೋನದ ಬಗ್ಗೆಯೂ ಮಾತಿಲ್ಲ ಏಕೆ?’ ಎಂದು ಪ್ರಶ್ನೆ ಮಾಡಿದೆ.
ಯುವಕರು, ಮಹಿಳೆಯರು, ರೈತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸೇರಿದಂತೆ ಸಮಾಜದ ಎಲ್ಲಾ ವರ್ಗದ ಏಳಿಗೆಗಾಗಿ ಕಾಂಗ್ರೆಸ್ ಸ್ಪಷ್ಟ ದೃಷ್ಟಿಕೋನದಲ್ಲಿ ಗ್ಯಾರಂಟಿಗಳನ್ನು ಮುಂದಿಟ್ಟು ಮತ ಕೇಳುತ್ತಿದೆ. ಇದುವರೆಗೂ ಬಿಜೆಪಿ ಭರವಸೆ ಮೂಡಿಸುವ ಯೋಜನೆಯನ್ನು ಜನರ ಮುಂದಿಟ್ಟಿಲ್ಲ. ಬಿಜೆಪಿಗೆ ಜನಹಿತ ಬೇಕಿಲ್ಲ ಎಂಬುದು ಇದರಲ್ಲೇ ಸ್ಪಷ್ಟವಾಗುತ್ತದೆ’ ಎಂದು ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.