ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನೋಡಿಕೊಳ್ಳುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ಕರ್ನಾಟಕದಲ್ಲಿ ಕೇವಲ ಮತಗಳನ್ನು ಸೆಳೆಯುವ ಮುಖಕ್ಕಾಗಿ ಯಡಿಯೂರಪ್ಪನವರನ್ನು ಬಳಸಿಕೊಳ್ಳುತ್ತಿರುವ ಹೈಕಮಾಂಡ್, ರಾಜ್ಯ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರಗಳ ಬಗ್ಗೆ ದೆಹಲಿಯಲ್ಲಿ ನಡೆಸಲಾಗುತ್ತಿರುವ ಮಹತ್ವದ ಸಭೆಗಳಿಂದ ಅವರನ್ನು ದೂರವಿಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿಗೆ ಯಡಿಯೂರಪ್ಪ ಬೇಕಿರುವುದು ಓಟು ಗಳಿಕೆಗೆ ಮುಖ ತೋರಿಸಲು ಮಾತ್ರ! ಟಿಕೆಟ್ ಹಂಚಿಕೆಯ ಸಭೆಗೆ ಮಾತ್ರ ಬಿಎಸ್ ಯಡಿಯೂರಪ್ಪ ಹೊರಗೆ, ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್, ಸಿ.ಟಿ.ರವಿ, ಕಟೀಲು ಒಳಗೆ! ಯಡಿಯೂರಪ್ಪ ಅವರಿಗೆ ಈಗ ಮಾರ್ಗದರ್ಶಕ ಮಂಡಳಿಯೂ ಇಲ್ಲ, ಬಿಜೆಪಿಗೆ ಮಾರ್ಗದರ್ಶನ ಬೇಕಿಲ್ಲ. ಬಿಎಸ್ ಯಡಿಯೂರಪ್ಪನವರ ರಾಜಕೀಯ ಬದುಕಿಗೆ ದುರಂತ ಅಂತ್ಯ ತೋರಿಸುತ್ತಿದೆ ಬಿಜೆಪಿ’ ಎಂದು ಹೇಳಿದೆ.
ಬಿಜೆಪಿಯೊಳಗೆ ಯಡಿಯೂರಪ್ಪನವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಕಾಂಗ್ರೆಸ್ಸಿನ ಆರೋಪ ಹೊಸತೇನಲ್ಲ. ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳದ ದಿನದಿಂದಲೂ ಇಂಥದ್ದೊಂದು ಆರೋಪವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಯಡಿಯೂರಪ್ಪನವರನ್ನು ಉದ್ದೇಶಪೂರ್ವಕವಾಗಿಯೇ ಅಧಿಕಾರದಿಂದ ಕೆಳಗಿಳಿಸಲಾಗಿದ್ದು, ರಾಜ್ಯದಲ್ಲಿ ಅವರು ಬಿಜೆಪಿಯನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದಿದ್ದಾರೆ. ಅಂಥ ವ್ಯಕ್ತಿಯೀಗ ಬಿಜೆಪಿ ಹೈಕಮಾಂಡ್ ಗೆ ಬೇಡವಾಗಿದೆ ಎಂದು ಆರೋಪಿಸುತ್ತಲೇ ಇದೆ.
ಮಾ. 18ರಂದು ಟ್ವೀಟ್ ಮಾಡಿದ್ದ ಕಾಂಗ್ರೆಸ್, ‘ದಶಕಗಳ ಕಾಲದ ಹೋರಾಟದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದು ‘ಮುಖ್ಯಮಂತ್ರಿ’ ಹುದ್ದೆಗೆ ಏರಿದವರು ಯಡಿಯೂರಪ್ಪ. ಆದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ‘ಸಂಚು’ ನಡೆಸಿ ಅದರಲ್ಲಿ ಎರಡೆರಡು ಬಾರಿ ಯಶಸ್ವಿಯೂ ಆಗಿದ್ದು ಬಿಜೆಪಿಯಲ್ಲಿರುವ ಇದೇ ‘ಸಂತೋಷ ಕೂಟ’ ಎಂದು ಟ್ವೀಟ್ ಮಾಡಿತ್ತು.
ಅದೇ ದಿನ ಮತ್ತೊಂದು ಟ್ವೀಟ್ ಮಾಡಿ, ಬಿಜೆಪಿಯಲ್ಲಿ @BSYBJP ಗೆ ಅಪಮಾನ ಇದೇ ಮೊದಲಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ‘ಸಂತೋಷ ಕೂಟ’ ಮೊದಲಿಂದಲೂ ಇದೆ. ಈ ‘ಸಂತೋಷ ಕೂಟ’ ಬಿಜೆಪಿಯಲ್ಲಿ ಯಡಿಯೂರಪ್ಪರಿಗೆ ಅಧಿಕಾರ ಸಿಗದಂತೆ ಮಾಡಲು, ಅಧಿಕಾರದಿಂದ ಇಳಿಸಲು, ಮೂಲೆಗುಂಪು ಮಾಡಲು ಕೊನೆಗೆ ಜೈಲಿಗೆ ಕಳುಹಿಸುವಲ್ಲಿಯೂ ಸಕ್ರಿಯ ಪಾತ್ರ ವಹಿಸಿದೆ’ ಎಂದು ಹೇಳಿತ್ತು.
ಇದೇ ಫೆಬ್ರವರಿಯಲ್ಲಿ ನಡೆದಿದ್ದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ, ಪ್ರಧಾನಿ ನರೇಂದ್ರ ಮೋದಿಯವರು ಯಡಿಯೂರಪ್ಪವರ ಕೈ ಹಿಡಿದು ನಡೆದಿದ್ದರು. ಅದು ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ, ಅದರ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಯಡಿಯೂರಪ್ಪನವರನ್ನು ಮೊದಲು ಕೈ ಹಿಡಿದು ನಡೆದ ಮೋದಿ, ಸ್ವಲ್ಪ ಹೊತ್ತಾದ ನಂತರ ಅವರನ್ನು ಹಿಂದೆ ಬಿಟ್ಟು ಮುಂದಕ್ಕೆ ಹೋಗಿದ್ದರು ಎಂದು ಹೇಳಿತ್ತಲ್ಲದೆ, ಮೋದಿಯವರು ತಮ್ಮನ್ನು ಬಿಟ್ಟು ಮುನ್ನಡೆದ ನಂತರ ಯಡಿಯೂರಪ್ಪನವರು ಏಕಾಂಗಿಯಾಗಿ ನಿಂತಿದ್ದ ಫೋಟೋವೊಂದನ್ನು ಹಾಕಿತ್ತು.