ದೆಹಲಿ:- ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ಮಾಡಿದ್ದಾರೆ.
ಗ್ಯಾರಂಟಿ ಟೀಕಿಸಿದ ಮೋದಿ ವಿರುದ್ಧ ಟೀಕಿಸಿದ ಖರ್ಗೆ, ಸುಳ್ಳು, ವಂಚನೆ, ನಕಲಿ, ಲೂಟಿ ಮತ್ತು ಪ್ರಚಾರ ನಿಮ್ಮ ಸರ್ಕಾರದ ಮೂಲಮಂತ್ರಗಳು ಎಂದರು.
ನಿಮ್ಮ ಸರ್ಕಾರದ 100 ದಿನಗಳ ಯೋಜನೆ ಅನ್ನೋದು ಬಿಟ್ಟಿ ಪ್ರಚಾರ. ಬಿಜೆಪಿ ಎಂದರೆ ದ್ರೋಹ ಮತ್ತು ಸುಳ್ಳು ಭರವಸೆ ನೀಡುವ ಪಕ್ಷ ಎಂದು ವಾಗ್ದಾಳಿ ಮಾಡಿದ್ದಾರೆ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ನಿಮ್ಮ ಭರವಸೆ ಏನಾಯ್ತು? ಭಾರತದ ನಿರುದ್ಯೋಗ ದರವು 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಯಾಕೆ? ಜನರ ಉಳಿತಾಯದ ಮಟ್ಟ ಕನಿಷ್ಟ ಮಟ್ಟಕ್ಕೆ ಏಕೆ ಕುಸಿದಿದೆ. ನಿಮ್ಮ ಅಚ್ಛೇ ದಿನದ ಭರವಸೆ ಏನಾಯ್ತು ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ
ಮಹಾರಾಷ್ಟ್ರದಲ್ಲಿ ನೀವು ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ದೆಹಲಿ ಏರ್ಪೋರ್ಟ್ನ ಮೇಲ್ಚಾವಣಿ ಹಾರಿಹೋಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಸೋರುತ್ತಿದೆ. ಅಟಲ್ ಸೇತು ಬಿರುಕು ಬಿಟ್ಟಿದೆ, ಗುಜರಾತ್ನ ಮೊರ್ಬಿ ಸೇತುವೆ ಕುಸಿದಿದೆ. ಬಿಹಾರದಲ್ಲಿ ಹೊಸ ಸೇತುವೆಗಳು ಕುಸಿದು ಬೀಳುವುದು ಸಾಮಾನ್ಯವಾಗಿದೆ. ದೇಶದ ಹಲವೆಡೆ ಲೆಕ್ಕವಿಲ್ಲದಷ್ಟು ರೈಲು ಅಪಘಾತಗಳು ಸಂಭವಿಸಿವೆ, ಆದರೆ ಸಚಿವರು ರೀಲ್ಸ್ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಉದ್ಯಮಿ ಅದಾನಿ ಹಗರಣ, ಸೆಬಿ ಹಗರಣ ಹಾಗೂ ಎಲೆಕ್ಟ್ರೋರಾಲ್ ಬಾಂಡ್ ಹಗರಣ ಇವೆಲ್ಲ ಏನು? ನೀರವ್, ಮಲ್ಯ, ಚೋಕ್ಸಿ ದೇಶ ಬಿಟ್ಟು ಹೋಗಲು ಅವಕಾಶ ಮಾಡಿಕೊಟ್ಟಿದ್ಯಾರು? ನಿಮ್ಮ ಆಡಳಿತದಲ್ಲಿ ಎಸ್ಸಿಗಳ ವಿರುದ್ಧದ ಅಪರಾಧಗಳಲ್ಲಿ 46% ಹೆಚ್ಚಳವಾಗಿದೆ. ಎಸ್ಟಿಗಳ ವಿರುದ್ಧದ ಅಪರಾಧಗಳಲ್ಲಿ 48% ಹೆಚ್ಚಳವಾಗಿದೆ. ಎಸ್ಸಿ/ಎಸ್ಟಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳು ಹೆಚ್ಚಳವಾಗಿದೆ. 2014ಕ್ಕೆ ಹೋಲಿಸಿದರೆ 2022ರಲ್ಲಿ 1.7 ಪಟ್ಟು ಹೆಚ್ಚಾಗಿದೆ. ನರೇಂದ್ರ ಮೋದಿಯೇ ಗ್ಯಾರಂಟಿ ಎನ್ನುವುದು ಬಿಜೆಪಿಯ ಕ್ರೂರ ಜೋಕ್ ಎಂದು ತೀವ್ರ ಹರಿಹಾಯ್ದಿದ್ದಾರೆ.
ಇನ್ನು ರಣದೀಪ್ ಸುರ್ಜೇವಾಲ ಕೂಡ ಟ್ವೀಟ್ ಮಾಡಿದ್ದು, ಸಾರ್ವಜನಿಕ ಜೀವನದಲ್ಲಿ ಹುದ್ದೆಯ ಜವಾಬ್ದಾರಿಯು ಅತ್ಯುನ್ನತವಾಗಿರುತ್ತದೆ. ಆ ಹುದ್ದೆಗೆ ಯಾವುದೇ ಬಾಧ್ಯತೆ ಬರಬಾರದು. ಕರ್ನಾಟಕದ ಜನಕಲ್ಯಾಣ ಯೋಜನೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಬೇಕು ಎಂದಿದ್ದಾರೆ.