ಚಿಕ್ಕಮಗಳೂರು: ಜೈನ ಮುನಿ ಹತ್ಯೆ ವಿಚಾರವಾಗಿ ಬಿಜೆಪಿ ನಾಯಕರ ಬಳಿ ಮಾಹಿತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಆಗ್ರಹಿಸಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಆರೋಪಕ್ಕೆ ತಿರುಗೇಟು ನೀಡಿದರು. ಐಸಿಸ್ ನಿಂದ ಹತ್ಯೆಯಾಗಿದೆ ಅಂತಾ ಸಿದ್ದು ಸವದಿ ಹೇಳಿದ್ದಾರೆ. ನಿಮ್ಮ ಬಳಿ ಮಾಹಿತಿ ಇದ್ದರೆ ತನಿಖಾ ಏಜೆನ್ಸಿ ಗಳಿಗೆ ಕೊಡಿ ಎಂದು ಒತ್ತಾಯಿಸಿದರು.
ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಗೃಹ ಇಲಾಖೆ ಪಾರದರ್ಶಕ ತನಿಖೆ ನಡೆಸುತ್ತಿದೆ. ತನಿಖೆ ನಡೆಯುವಾಗ ಎಲ್ಲವನ್ನೂ ತೆರೆದಿಡಲು ಆಗಲ್ಲ, ಆದರೆ ಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ಕಾರಣ ಎಂದು ತಿಳಿದುಬಂದಿದೆ ಎಂದರು. ಬಜೆಟ್ ಮಂಡನೆಯಾಗಿದೆ, ಸದನ ನಡೀತಿದೆ. ಆದ್ರೆ ನಿಮ್ಮ ವಿರೋಧ ಪಕ್ಷದ ನಾಯಕ ಎಲ್ಲಿದ್ದಾರೆ? ಇದು ಸದನಕ್ಕೆ ಕಪ್ಪುಚುಕ್ಕೆ ಎಂದರು.
ಜೈನ ಮುನಿ ಹತ್ಯೆ ಸಿಬಿಐಗೆ ವಹಿಸುವ ವಿಚಾರವಾಗಿ ಮಾತನಾಡಿ, ತಮ್ಮ ತನಿಖಾ ಸಂಸ್ಥೆಗಳಿಗೆ ತನಿಖಾ ಸಾಮರ್ಥ್ಯ ಇಲ್ಲ ಅಂದು ಕೊಂಡಿದ್ದೀರಾ.? ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ. ರಾಜಕೀಯ ಹಸ್ತಕ್ಷೇಪ ಇಲ್ಲದೆ ತನಿಖೆ ನಡೆಯಲಿದೆ. ಮೊದಲು ನಿಮ್ಮ ಬಳಿ ಇರುವ ಮಾಹಿತಿ ಕೊಡಿ ಎಂದರು.