ಬೆಂಗಳೂರು: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಗುಸುಗುಸು ಬಹಳ ದಿನದಿಂದ ಕೇಳಿಬರುತ್ತಿದೆ. ಅದಕ್ಕೆ ಬಿಎಸ್ ಯಡಿಯೂರಪ್ಪನವರ ಹೇಳಿಕೆಯಿಂದ ಸುಳಿವು ಸಿಕ್ಕಿದಂತಾಗಿದೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೋ ಅದು ಅಕ್ಷರಶಃ ಸತ್ಯ. ನಾನು ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ಎಚ್ಡಿ ಕುಮಾರಸ್ವಾಮಿ ಮಾತನಾಡಿದ್ದರು. ಕೆಲಸ ಆಗಬೇಕೆಂದರೆ ಸಿಎಂ ಕಚೇರಿಗೆ 30 ಲಕ್ಷ ರೂ. ನೀಡಬೇಕು ಎಂಬ ಆರೋಪವನ್ನು ಮಾಜಿ ಸಿಎಂ ಮಾಡಿದ್ದರು.
ಕಾಂಗ್ರೆಸ್ ಸರ್ಕಾರದ ಮೇಲೆ ಬಿಜೆಪಿಯವರಿಗಿಂತ ಹೆಚ್ಚು ಎಚ್ಡಿ ಕುಮಾರಸ್ವಾಮಿ ಅವರೇ ವಾಗ್ದಾಳಿ ನಡೆಸುತ್ತಿರುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹತ್ತಿರವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಪ್ಲಸ್ ಆಗುವ ಸಾಧ್ಯತೆ ಇದೆ.