ಮೈಸೂರು: ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವುದರ ಹಿಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಗಾದರೂ ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕೆಂಬ ಉದ್ದೇಶದಿಂದ ಬಿಜೆಪಿ- ಜೆಡಿಎಸ್ ಇನ್ನಿಲ್ಲದ ಆರೋಪಗಳನ್ನು ಮಾಡುತ್ತಿವೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಡಾಗೆ ಸಂಬಂಧಿಸಿದಂತೆ ಸೆ. 29ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಅವರ ಪತ್ರದ ಆಧಾರದ ಮೇಲೆ ಅಮಿತ್ ಶಾ ಸೂಚನೆ ಮೇರೆಗೆ ಇ.ಡಿ ಪಿಎಂಎಲ್ ಆಕ್ಟ್ ಅಡಿ ಇಸಿಐಆರ್ ದಾಖಲಿಸಿಕೊಂಡಿದೆ.
ಅದೇ ದಿನ ಸ್ನೇಹಮಯಿ ಕೃಷ್ಣ ಕೂಡ ಕುಮಾರಸ್ವಾಮಿ ಪತ್ರದ ಮಾದರಿಯಲ್ಲೇ ಇ.ಡಿಗೆ ಇ- ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಇದನ್ನೆಲ್ಲ ನೋಡಿದರೆ ವ್ಯವಸ್ಥಿತವಾಗಿ ಬಿಜೆಪಿ ಹಾಗೂ ಜೆಡಿಎಸ್ನವರು ಮಾಡುತ್ತಿರುವುದು ಎಂಬುದು ತಿಳಿಯುತ್ತದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.