ಬೆಂಗಳೂರು: ಮಂಡ್ಯಕ್ಕೆ ಬೆಂಕಿ ಹಚ್ಚಲು ಆಗಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಗೆ ಸಚಿವ ಚೆಲುವರಾಯಸ್ವಾಮಿ ಎಚ್ಚರಿಕೆ ನೀಡಿದರು. ನಗರದಲ್ಲಿ ಮಾತನಾಡಿದ ಅವರು,ಮಂಡ್ಯದಲ್ಲಿ ಹನುಮಧ್ವಜ ವಿವಾದಕ್ಕೆ ಸಂಬಂಧ ಮಂಡ್ಯದ ಶಾಂತಿ ಕದಡಲು ಬಿಜೆಪಿ ಹಾಗೂ ಜೆಡಿಎಸ್ ನಿಂದ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಶಾಂತಿಯನ್ನು ಕದಡಬೇಡಿ ಎಂದು ಅಲ್ಲಿನ ಸಾರ್ವಜನಿಕರು ಎಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿಗೆ ಮನವಿ ಮಾಡಿದ್ದಾರೆ. ಶಾಂತಿ ಸಭೆಗೆ ಸಂಘಸಂಸ್ಥೆಗಳನ್ನು ಕರೆದಿದ್ದೇವೆ. ಏನು ಸಮಸ್ಯೆಗಳಿಗೆ ಹಾಗೂ ಅಭಿಪ್ರಾಯಗಳಿಗೆ ಮನ್ನಣೆ ನೀಡ್ತೇವೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಹಾಗೂ ಆರ್ ಅಶೋಕ್ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಮಂಡ್ಯದಲ್ಲಿ ಇವೆಲ್ಲಾ ನಡೆಯಲ್ಲ ಎಂದು ಅಲ್ಲಿಯ ಸಾರ್ವಜನಿಕರೇ ಹೇಳ್ತಿದ್ದಾರೆ ಎಂದು ಹೇಳಿದರು. ಮಂಡ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಬಿಜೆಪಿಗೆ ಹಾಗೂ ಜೆಡಿಎಸ್ ಗೆ ಸಾಧ್ಯವಿಲ್ಲ ಎಂದರು.