ರಾಯ್ಪುರ: ಛತ್ತೀಸ್ಗಢದ ವಿಧಾನಸಭಾ ಚುನಾವಣೆಗೂ (Assembly Elections) ಮುನ್ನ ಬಂಡಾಯ ಪೀಡಿತ ಮೊಹ್ಲಾ-ಮಾನ್ಪುರ್-ಅಂಬಗಢ ಚೌಕಿ ಜಿಲ್ಲೆಯಲ್ಲಿ ಬಿಜೆಪಿ (BJP) ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೀಡಾದ ಬಿಜೆಪಿ ಮುಖಂಡ ಬಿರ್ಜು ತಾರಾಮ್ (53), ಪಕ್ಷದ ರೈತ ವಿಭಾಗದ ಉಪಾಧ್ಯಕ್ಷರಾಗಿದ್ದರು. ಈ ಹಿಂದೆ ಮನ್ಪುರ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕೊಲೆಯಲ್ಲಿ ಮಾವೋವಾದಿ ಗಳು ಹಾಗೂ ಸ್ಥಳೀಯ ಗಲಭೆಕೋರರು ಭಾಗಿಯಾಗಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಸಾರ್ವಜನಿಕ ರ್ಯಾಲಿಯಲ್ಲಿ ಅವರು ಭಾಗಿಯಾಗಿದ್ದರು. ಬಳಿಕ ಮನೆಗೆ ಹಿಂದಿರುಗಿ, ದೇವಸ್ಥಾನದಲ್ಲಿ ದುರ್ಗಾದೇವಿ ಪೂಜೆಗೆ ತೆರಳಿದ್ದರು. ಬಳಿಕ ಅಲ್ಲಿಂದ ವಾಪಾಸ್ ಆಗುವ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ನಾಲ್ಕು ಗುಂಡುಗಳು ಅವರಿಗೆ ತಗುಲಿವೆ. ಇದರಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರಂಭಿಕ ತನಿಖೆಯಲ್ಲಿ ಮಾವೋವಾದಿಗಳ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.