ಗಾಂಧಿನಗರ: ಗುಜರಾತ್ನ ರಾಜುಲಾ ನಗರದ ಬಿಜೆಪಿ ಶಾಸಕ ಹೀರಾ ಸೋಲಂಕಿ (BJP MLA Hira Solanki) ಅವರು ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸುವ ಮೂಲಕ ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದಾರೆ. ನಾಲ್ವರನ್ನು ಕಲ್ಪೇಶ್ ಶಿಯಾ, ನಿಕುಲ್ ಗುಜಾರಿಯಾ, ವಿಜಯ್ ಗುಜಾರಿಯಾ ಮತ್ತು ಜೀವನ್ ಗುಜಾರಿಯಾ ಎಂದು ಗುರುತಿಸಲಾಗಿದೆ. ಈ ನಾಲ್ವರು ಸಮೀಪದ ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಹೀಗೆ ಈಜುತ್ತಾ ಈಜುತ್ತಾ ಅವರು ಮುಳುಗಲು ಪ್ರಾರಂಭಿಸಿದರು.
ಇತ್ತ ಘಟನೆಯ ಬಗ್ಗೆ ತಿಳಿದ ಶಾಸಕ ಸೋಲಂಕಿ ತಕ್ಷಣ ಸ್ಥಳಕ್ಕಾಗಮಿಸಿ ಇತರರ ಸಹಾಯದಿಂದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದಾರೆ. ಅಲ್ಲದೆ ನಾಲ್ವರಲ್ಲಿ ಮೂವರನ್ನು ರಕ್ಷಿಸಿದ್ದಾರೆ. ಆದರೆ ಓರ್ವನನ್ನು ಉಳಿಸಲು ಸಾಧ್ಯವಾಗಲಿಲ್ಲ. ದೀರ್ಘ ಕಾಲದ ಹುಡುಕಾಟದ ನಂತರ ಆತನ ಶವವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು. ಸದ್ಯ ಸೋಲಂಕಿ ಯುವಕರನ್ನು ರಕ್ಷಿಸಿದ ವೀಡಿಯೋ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಬಳಿಕ ಎಲ್ಲರೂ ಶಾಸಕರಿಗೆ ಶಹಬ್ಬಾಸ್ ಗಿರಿ ನೀಡಿದರು.
ಇತ್ತೀಚೆಗೆ ಗುಜರಾತಿನ ಬೊಟಾಡ್ ಜಿಲ್ಲೆಯ ಐವರು ಮಕ್ಕಳು ಕೃಷ್ಣ ಸಾಗರ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ್ದರು. ವರದಿಯ ಪ್ರಕಾರ, ಇಬ್ಬರು ಮಕ್ಕಳು ಸರೋವರದಲ್ಲಿ ಈಜುತ್ತಿದ್ದಾಗ ಅವರು ಮುಳುಗಲು ಪ್ರಾರಂಭಿಸಿದರು. ಈ ಹಿನ್ನೆಲೆಯಲ್ಲಿ ಅವರನ್ನು ರಕ್ಷಿಸಲು ಇನ್ನೂ ಮೂವರು ಕೆರೆಗೆ ಹಾರಿದ್ದು, ಕೊನೆಗೆ ಅವರೂ ನೀರಿನಲ್ಲಿ ಮುಳುಗಿದ್ದಾರೆ.