ಯಾದಗಿರಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ (Election) ಕಾವು ರಂಗೇರುತ್ತಿದ್ದಂತೆ, ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಕೊಂಡು, ಮತದಾರರ ಓಲೈಕೆ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಯಾದಗಿರಿಯ (Yadagiri) ಸುರಪುರದ ಬಿಜೆಪಿ (BJP) ಶಾಸಕ ರಾಜೂಗೌಡ ಮಸೀದಿ ನಿರ್ಮಾಣಕ್ಕೆ ಭೂಮಿಪೂಜೆಯಲ್ಲಿ ಮುಸ್ಲಿಂ ಟೋಪಿ ಧರಿಸುವ ಮೂಲಕ, ಮತಗಳ ಓಲೈಕೆ ಮಾಡಲು ಶುರುಮಾಡಿದ್ದಾರೆ.
ಇಡೀ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಒಡನಾಟ ಇಟ್ಕೊಂಡಿರುವ ಶಾಸಕ ರಾಜೂಗೌಡ (Raju Gowda), ಭಾವೈಕ್ಯತೆ ಮೆರೆಯುವ ಮೂಲಕ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಸುರಪುರ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಮುಸ್ಲಿಂ ಟೋಪಿ ಧರಿಸಿ ಬಿಲಾಲ್ ಮಸೀದಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ರಾಜೂಗೌಡ ಕೋಮು ಸೌಹಾರ್ದತೆಯ ಸಂದೇಶ ಸಾರಿದರು.
ತಾವು ಮುಸ್ಲಿಂ ಟೋಪಿ ಧರಿಸಿ, ಮುಸ್ಲಿಂ ಸಮುದಾಯದವರಿಗೆ ಕೇಸರಿ ಶಾಲು ಹೊದಿಸಿ ಭ್ರಾತೃತ್ವ ಭಾವನೆ ಮೆರೆದ ಶಾಸಕ ರಾಜೂಗೌಡ, ನಾನೊಬ್ಬ ಹಿಂದೂ ಆಗಿ ಮುಸ್ಲಿಂ ಟೋಪಿ ಹಾಕೊಳ್ಳುತ್ತೇನೆ. ನನ್ನ ಪಕ್ಕದಲ್ಲಿರುವ ಮುಸ್ಲಿಂ ಸ್ನೇಹಿತ ಒಬ್ಬ ಮುಸ್ಲಿಂ ಆಗಿ ಕೇಸರಿ ಶಾಲು ಹಾಕಿಕೊಳ್ಳುತ್ತಾನೆ. ನಮ್ಮಲ್ಲಿ ಯಾವುದೇ ಜಾತಿ-ಧರ್ಮ, ಬೇಧ-ಭಾವ ಇಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಧರ್ಮ ದಂಗಲ್ ನಡುವೆ, ರಾಜೂಗೌಡರ ಈ ನಡೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಇದು ಕೇವಲ ಚುನಾವಣೆ ತಂತ್ರಗಾರಿಕೆಯ ಗಿಮಿಕ್ ಆಗದಿರಲಿ ಅಂತಾನೂ ಕೆಲವರು ಕಾಲೆಳೆದಿದ್ದಾರೆ.