ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರಿ ದಾರಿಯಲ್ಲಿ ಸಾಗುತ್ತಿದೆಯೇ ಎಂಬ ವಿಚಾರದ ಕುರಿತು ಮಾತನಾಡಲು ಆಹ್ವಾನಿಸಿದ ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯದ (Oxford University) ಆಹ್ವಾನವನ್ನು ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ತಿರಸ್ಕರಿಸಿದ್ದಾರೆ.
ದೇಶದ ಆಂತರಿಕ ಸವಾಲುಗಳನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಚರ್ಚಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ವಾತಂತ್ರ್ಯದ ನಂತರದ ಕಳೆದ ಏಳು ದಶಕಗಳಲ್ಲಿ ಭಾರತ ವಿವಿಧ ಸರ್ಕಾರಗಳಿಂದ ರೂಪುಗೊಂಡಿದೆ. ದೇಶವು ಅಭಿವೃದ್ಧಿಯ ಸರಿ ದಾರಿಯಲ್ಲಿ ಸಾಗುತ್ತಿದೆ. ಚುನಾಯಿತ ಪ್ರತಿನಿಧಿಯಾಗಿ, ಆಗುಹೋಗುಗಳನ್ನು ಪರಿಶೀಲಿಸಿ ಸಂಸತ್ತಿನ ಒಳಗೆ ಚರ್ಚಿಸುವುದು ಸೂಕ್ತ ನಡೆಯಾಗಿದೆ ಎಂದಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಲಂಡನ್ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ನಡೆಸಿದ್ದು ಕೋಲಾಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ (BJP) ಒತ್ತಾಯಿಸಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್, ವಿದೇಶ ಪ್ರವಾಸದಲ್ಲಿದ್ದಾಗ ಮೋದಿ, ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಎತ್ತಿಹಿಡಿದಿತ್ತು. ಲಂಡನ್ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ (University of Cambridge) ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವ ಕ್ಷೀಣಿಸುತ್ತಿದೆ ಮತ್ತು ಪ್ರಶ್ನಿಸುವ ದ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದಿದ್ದರು.