ಹಾಸನ: ಬಿಜೆಪಿಯವರು (BJP) ಚುನಾವಣಾ ಪ್ರಚಾರಕ್ಕೆ ಅಮೆರಿಕಾ ಪ್ರೆಸಿಡೆಂಟ್ ಹಾಗೂ ರಷ್ಯಾ ಪ್ರೆಸಿಡೆಂಟ್ನ್ನು ಕರೆದುಕೊಂಡು ಬರಲಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ವ್ಯಂಗ್ಯವಾಡಿದ್ದಾರೆ.
ಬೇಲೂರಿನಲ್ಲಿ (Belur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಸನ ಜಿಲ್ಲೆಗೆ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಭೇಟಿ ವಿಚಾರವಾಗಿ, ನಮಗೆ ಮಾಜಿ ಪ್ರಧಾನಿ ದೇವೇಗೌಡರು (H.D Deve Gowda), ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು (H.D Kumaraswamy) ಹಾಗೂ ಕ್ಷೇತ್ರದ ಜನರೇ ಸಾಕು. ಇವರೇ ನಮಗೆ ಚಾಣಕ್ಯರು, ನಮ್ಮ ಬಳಿ ಬೇರೆ ಚಾಣಕ್ಯರು ಯಾರೂ ಇಲ್ಲ ಎಂದು ಕುಟುಕಿದ್ದಾರೆ.
ಜೆಡಿಎಸ್ (JDS) ಈ ಬಾರಿ 123 ಸೀಟ್ಗಳ ಟಾರ್ಗೆಟ್ ಮಾಡಿದೆ. ಈ ಚುನಾವಣೆಯಲ್ಲಿ ಬಹುಮತ ಕೊಡಿ ಎಂದು ಜನರ ಬಳಿ ಕೇಳಿದ್ದೇವೆ. ದೇವೇಗೌಡರು, ಕುಮಾರಸ್ವಾಮಿಯವರು ಸಾಮಾನ್ಯ ರೈತನ ಮಕ್ಕಳು, ನಮಗೆ ಜನರ ಆಶೀರ್ವಾದ ಇರುವವರೆಗೂ ಯಾವುದೇ ತೊಂದರೆ ಆಗುವುದಿಲ್ಲ. ನಮಗೆ ಮತದಾರರ ಮೇಲೆ ನಂಬಿಕೆ ಇದೆ. ಈ ಬಾರಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.
ರಾಜ್ಯದ ಜನ ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ಇವೆರಡು ಪಕ್ಷಗಳನ್ನು ಸ್ವಲ್ಪ ದಿನ ವಿಶ್ರಾಂತಿಗೆ ಕಳುಹಿಸಬೇಕೆಂದು ತೀರ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ಗ್ರಾಮಗಳ ಅಭಿವೃದ್ಧಿ ಸೇರಿ ಐದು ಕಾರ್ಯಕ್ರಮಗಳನ್ನು ಜನ ಮೆಚ್ಚಿದ್ದಾರೆ. ನಮ್ಮ ರಾಜ್ಯ ಉಳಿಯಬೇಕು ಅದಕ್ಕಾಗಿ ದುಡಿಯುತ್ತೇವೆ ಎಂದು ಹೇಳಿದ್ದಾರೆ
ಪ್ರೀತಂ ಗೌಡ ಸೈಲೆಂಟ್ ಆಗಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರೀತಂ ಗೌಡರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ಅವರು ದೊಡ್ಡವರಿರುವಾಗ ಆ ಮಟ್ಟಕ್ಕೆ ನಾನು ಬೆಳೆದಿಲ್ಲ ಎಂದಿದ್ದಾರೆ.