ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಆಯ್ಕೆ ಸಂಬಂಧ ಒಂದಷ್ಟು ಬೆಳವಣಿಗೆಗಳು ಚುರುಕುಗೊಂಡಿವೆ.ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿ (C.T.Ravi) ಹೆಸರು ಕೈಬಿಟ್ಟಿರುವ ವರಿಷ್ಠರು, ಅವರಿಗೆ ಇಂದು ದೆಹಲಿಗೆ ಬುಲಾವ್ ಕೊಟ್ಟಿರೋದು ಕುತೂಹಲ ಮೂಡಿಸಿದೆ.
ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಮೇಲೆ ಗಮನ ಹರಿಸುವ ಲಕ್ಷಣ ಕಾಣಿಸುತ್ತಿದೆ. ರಾಜ್ಯ ಬಿಜೆಪಿಗೆ ಮುಂದಿನ ಸಮರ್ಥ ಸಾರಥಿಯ ಆಯ್ಕೆಗೆ ಹೈಕಮಾಂಡ್ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದಷ್ಟು ಸುಳಿವುಗಳು ಸಿಗುತ್ತಿದ್ದು, ಪೂರಕ ವಿದ್ಯಮಾನಗಳು ನಡೆಯುತ್ತಿವೆ. ಮುಂದಿನ ಬಿಜೆಪಿ ಸಾರಥಿಯಾಗಿ ಮಾಜಿ ಶಾಸಕ ಸಿ.ಟಿ ರವಿ ಹೆಸರು ಮುಂಚೂಣಿಯಲ್ಲಿದೆ.
ಶನಿವಾರವಷ್ಟೇ ಅವರ ಹೆಸರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೊಕ್ ಕೊಟ್ಟಿರೋದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿರುವ ಸಿ.ಟಿ ರವಿ, ತಾವೀಗ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಷ್ಟೇ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲದಿದ್ದರೂ ವರಿಷ್ಠರು ಕೊಡುವ ಯಾವುದೇ ಜವಾಬ್ದಾರಿ ನಿಭಾಯಿಸುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
![Demo](https://prajatvkannada.com/wp-content/uploads/2023/08/new-Aston-Band.jpeg)