ಲೋಕಸಭಾ ಚುನಾವಣೆಗೆ ಹಲವು ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ವಿಚಾರಕ್ಕೆ ಸಂಬಂಧಿಸಿ ಟಿಕೆಟ್ ಇಲ್ಲ ಎಂಬ ವಿಚಾರ ಹರಿದಾಡುತ್ತಿದ್ದರೂ ಹೈಕಮಾಂಡ್ ಮೌನದ ಬಗ್ಗೆ ಹಿರಿಯ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವರಿಷ್ಠರ ಮಧ್ಯಪ್ರವೇಶಕ್ಕೆ ಬಹಿರಂಗವಾಗಿ ಸಂಸದ ಡಿ.ವಿ. ಸದಾನಂದ ಗೌಡ ಆಗ್ರಹಿಸಿದ್ದರೆ. ಮತ್ತೊಂದೆಡೆ ಚುನಾವಣಾ ನಿವೃತ್ತಿ ಪಡೆಯುವುದಾಗಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.
ಸಂಸದ ಸಂಗಣ್ಣ ಕರಡಿ ಕೂಡಾ ಆಪ್ತರ ಬಳಿ ಟಿಕೆಟ್ ಸಿಗದಿದ್ದಲ್ಲಿ ನಿವೃತ್ತಿಯ ಮಾತನಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಟಿಕೆಟ್ ಇಲ್ಲ ಎಂದು ವದಂತಿ ಹರಿದಾಡಿದರೆ ಇನ್ನೂ ಒಂದು ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡುವುದು ಹೇಗೆ ಎಂಬ ಬಗ್ಗೆ ಸಂಸದರು ಆಕ್ಷೇಪ ಹೊಂದಿದ್ದಾರೆ. ಇಷ್ಟೆಲ್ಲಾ ಆದರೂ ಹೈ ಕಮಾಂಡ್ ಮೌನವಾಗಿದ್ದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಇರಲಿದ್ದಾರೆ.