ನವದೆಹಲಿ: ಕರ್ನಾಟಕ ಬಿಜೆಪಿ (Karnataka BJP) ನಾಯಕರ ಕುಟುಂಬ ರಾಜಕಾರಣಕ್ಕೆ (Family Politics) ಪ್ರಧಾನಿ ನರೇಂದ್ರ ಮೋದಿ (PM Narendra Modi) ಗರಂ ಆಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಕರ್ನಾಟಕ ಚುನಾವಣೆಯಲ್ಲಿ (Karnataka Election) ಟಿಕೆಟ್ ಹಂಚಿಕೆ ಸಂಬಂಧ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಸರಣಿ ಸಭೆ ನಡೆಸುತ್ತಿದ್ದಾರೆ. ಭಾನುವಾರ ಮೈಸೂರಿನ ಕಾರ್ಯಕ್ರಮ ಮುಗಿಸಿ ದೆಹಲಿಗೆ ತೆರಳಿದ ಬಳಿಕ ಪ್ರಧಾನಿ ಮೋದಿ, ಜೆಪಿ ನಡ್ಡಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಭೆ ನಡೆದಿತ್ತು. ಈ ವೇಳೆ ರಾಜ್ಯ ನಾಯಕರು ತಂದ ಸಮೀಕ್ಷಾ ವರದಿ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ನೋಡಿ ಮೋದಿ ಅಸಮಾಧಾನಗೊಂಡಿದ್ದಾರೆ.
ಹಲವು ನಾಯಕರು ಪುತ್ರರಿಗೆ ಟಿಕೆಟ್ ಕೇಳಿದ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಿಗೆ ಪುತ್ರರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಈ ನಾಯಕರ ನಡೆಯನ್ನು ಕಂಡು ಅಸಮಾಧಾನಗೊಂಡ ಮೋದಿ, ಕುಟುಂಬ ರಾಜಕಾರಣ ವಿರುದ್ಧ ಮಾತನಾಡುವ ನಾವೇ ಮಕ್ಕಳಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ನೀವು ಮಾಡಿದ ಎಲ್ಲಾ ಸಮೀಕ್ಷೆಗಳು ಪ್ರಮುಖ ನಾಯಕರ ಪರವೇ ಯಾಕಿದೆ ಎಂದು ಕೇಳಿದ್ದಾರೆ.
ಕುಟುಂಬದ ವ್ಯಕ್ತಿಗಳಿಗೆ ಯಾಕೆ ಟಿಕೆಟ್ ನೀಡಬೇಕು. ಆ ಕ್ಷೇತ್ರದಲ್ಲಿ ಬೇರೆ ಸಮರ್ಥ ವ್ಯಕ್ತಿಗಳು ಇಲ್ಲವೇ ಎಂದು ನಾಯಕರನ್ನು ಪ್ರಶ್ನಿಸಿದ್ದಾರೆ. ಅಂತಿಮವಾಗಿ ಪ್ರಮುಖ ನಾಯಕರು ಮಕ್ಕಳಿಗಾಗಿ ಕೇಳಿದ ಕ್ಷೇತ್ರಗಳು ಸೇರಿ ಹಲವು ಕ್ಷೇತ್ರಗಳನ್ನು ಮರುಪರಿಶೀಲಿಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ತನ್ನಿ ಎಂದು ಸೂಚನೆ ನೀಡಿದ್ದಾರೆ.
ಮೋದಿ ಸೂಚನೆಯ ಬೆನ್ನಲ್ಲೇ ಸೋಮವಾರ ರಾಜ್ಯ ನಾಯಕರು ಇಡೀ ದಿನ ಕ್ಷೇತ್ರದಲ್ಲಿರುವ ಬೇರೆ ನಾಯಕರ ಹೆಸರು ಇರುವ ಪಟ್ಟಿಯನ್ನು ಸಿದ್ಧಪಡಿಸಿ ಕೊಟ್ಟಿದ್ದಾರೆ. ಈ ಪಟ್ಟಿ ಹೈಕಮಾಂಡ್ ನಾಯಕರಿಗೆ ಮೆಚ್ಚುಗೆಯಾಗಿದ್ದರೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಮಂಗಳವಾರವೇ ಬಿಡುಗಡೆಯಾಗುವ ಸಾಧ್ಯತೆಯಿದೆ.