ಬಿಡದಿ:– ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಈಗಾಗಲೇ ಪಾದಯಾತ್ರೆ ಮಾಡುತ್ತಿದೆ. ಪಾದಯಾತ್ರೆ ಮುಗಿದ ಬಳಿಕ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭಾನುವಾರ ಹೇಳಿದ್ದಾರೆ. ಮೈಸೂರು ಚಲೋ ಪಾದುಯಾತ್ರೆಯ ಎರಡನೇ ದಿನ ಮಾತನಾಡಿದ ಅವರು, ‘ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಆದರೆ ಭ್ರಷ್ಟಾಚಾರ ಮತ್ತು ಅಧಿಕಾರದ ದುರಹಂಕಾರದ ವಿರುದ್ಧ. ಈ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಆಗಸ್ಟ್ 10 ರಂದು ಪಾದಯಾತ್ರೆ ಮುಗಿದ ನಂತರ ನಾವು ಒಂದೆರಡು ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದೇವೆ ಎಂದಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಅವ್ಯವಹಾರದಲ್ಲಿ ಶಾಮೀಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಡ ಹೇರಲು ಆಗಸ್ಟ್ ಅಂತ್ಯದ ವೇಳೆಗೆ ಬಳ್ಳಾರಿಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ.
ಬಿಡದಿ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಆಡಳಿತಾರೂಢ ಕಾಂಗ್ರೆಸ್ ಜನಾಂದೋಲನ ಸಭೆಗಳನ್ನು ಆಯೋಜಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ ಕಾಲದ ವಿಪರ್ಯಾಸವಲ್ಲವೇ? ಅವರು ಅಧಿಕಾರದಲ್ಲಿದ್ದಾರೆ ಮತ್ತು ಎಲ್ಲಾ ದುಡ್ಡು ಹೊಂದಿದ್ದಾರೆ. ಆದರೆ ಅವರು ನಮ್ಮ ಪಾದಯಾತ್ರೆಯನ್ನು ಎದುರಿಸಲು ಜನಾಂದೋಲನ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಇದು, ನಮ್ಮ ಪಾದಯಾತ್ರೆಯಿಂದ ಸರ್ಕಾರಕ್ಕೆ ಆತಂಕ ಸೃಷ್ಟಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ನಮ್ಮ ಪ್ರಶ್ನೆಗಳಿಗೆ ಅವರೇ ಉತ್ತರ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.