ಲಖನೌ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ‘ಪಿಡಿಎ’ ಮಂತ್ರ ಜಪಿಸಿದ್ದಾರೆ. ‘ಪಿಚ್ಡೆ (ಹಿಂದುಳಿದ ವರ್ಗಗಳು), ದಲಿತ ಮತ್ತು ಅಲ್ಪಸಂಖ್ಯಾತರು’ (ಪಿಡಿಎ) ಬಿಜೆಪಿಗೆ ಸೋಲು ಉಣಿಸುತ್ತಾರೆ ಎಂದು ಅಖಿಲೇಶ್ ಭರವಸೆ ವ್ಯಕ್ತಪಡಿಸಿದ್ದಾರೆ. ದೊಡ್ಡ ರಾಷ್ಟ್ರೀಯ ಪಕ್ಷಗಳು ನಮ್ಮ ಬೆಂಬಲಕ್ಕೆ ನಿಂತರೆ ಉತ್ತರ ಪ್ರದೇಶದ ಎಲ್ಲ 80 ಸೀಟುಗಳಲ್ಲಿಯೂ ಬಿಜೆಪಿಯನ್ನು ಸೋಲಿಸಬಹುದು ಎಂದು ಅವರು ಲಖನೌದಲ್ಲಿ ಹೇಳಿಕೆ ನೀಡಿದ್ದಾರೆ.
ನಿರ್ದಿಷ್ಟ ರಾಜ್ಯದಲ್ಲಿ ಯಾವ ಮಿತ್ರ ಪಕ್ಷ ಹೆಚ್ಚು ಬಲಿಷ್ಠವಾಗಿದೆಯೋ ಅದರ ಆಧಾರದಲ್ಲಿ ಸೀಟುಗಳ ಹಂಚಿಕೆ ನಿರ್ಧರಿಸಬೇಕು ಎಂದು ತಾವು ಯಾವಾಗಲೂ ಪ್ರತಿಪಾದಿಸುತ್ತಿರುವುದಾಗಿ ಹೇಳಿದ್ದಾರೆ. ಒಗ್ಗಟ್ಟಿನ ವಿರೋಧ ಪಕ್ಷಕ್ಕೆ ಬದ್ಧವಾಗಿರುವುದರ ಕುರಿತಾದ ಪ್ರಯತ್ನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅಖಿಲೇಶ್, ’80 ಅನ್ನು ಸೋಲಿಸಿ, ಬಿಜೆಪಿಯನ್ನು ಓಡಿಸಿ’ ಎಂಬ ಘೋಷಣೆ ಕೂಗಿದರು.”ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಎಂದಿಗೂ ನಾವು ಸೀಟುಗಳ ವಿಚಾರದಲ್ಲಿ ಕಿತ್ತಾಟ ನಡೆಸಿದ್ದನ್ನು ನೀವು ಕೇಳುವುದು ಸಾಧ್ಯವೇ ಇಲ್ಲ” ಎಂದು ತಿಳಿಸಿದ್ದಾರೆ.