ಭಾರತದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯು ಸಂಪೂರ್ಣ ಬಿಜೆಪಿ ನಿಯಂತ್ರಣದಲ್ಲಿತ್ತು. ಬಿಜೆಪಿ ಬಯಸಿದಂತೆ ಚುನಾವಣ ಆಯೋಗ ಚುನಾವಣೆಯನ್ನು ನಡೆಸಿತು ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಅಮೆರಿಕಾದ ಜಾರ್ಜ್ ಟೌನ್ ನಲ್ಲಿ ವಿದ್ಯಾರ್ಥಿಗಳನ್ನುಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಚುನಾವಣೆ ನ್ಯಾಯಸಮ್ಮತವಾಗಿ ನಡೆದಿದ್ದರೆ ಬಿಜೆಪಿ 240 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ. ಬಿಜೆಪಿ ತನ್ನ ಯೋಚನೆ ಮತ್ತು ಯೋಜನೆಗಳನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಪ್ರಚಾರ ಮಾಡುವುದಕ್ಕೆ ಬೇಕಾದ ಅವಕಾಶವನ್ನು ಚುನಾವಣ ಆಯೋಗ ಕಲ್ಪಿಸಿಕೊಟ್ಟಿತು. ಹೀಗಾಗಿ ಪ್ರಧಾನಿ ಮೋದಿ ತಮ್ಮ ಉದ್ದೇಶಗಳನ್ನು ನಿಖರವಾಗಿ ಜನರಿಗೆ ತಲುಪಿಸಿದರು ಎಂದಿದ್ದಾರೆ.
ಚುನಾವಣೆ ನಡೆಸುವ ಸಮಯದಲ್ಲಿ ಬಿಜೆಪಿಯ ಬಳಿ ಸಾಕಷ್ಟು ಹಣಕಾಸಿನ ಶಕ್ತಿ ಇತ್ತು. ಆದರೆ ಆ ಸಮಯದಲ್ಲಿ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ಅಮಾನತಿನಲ್ಲಿಟ್ಟು, ಹಣಕಾಸು ನೆರವು ದೊರೆಯದಂತೆ ಮಾಡಲಾಗಿತ್ತು. ಆದರೂ ಚುನಾವಣೆಯಲ್ಲಿ ನಾವು ಗಳಿಸಿದ ಸ್ಥಾನಗಳ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ರಾಹುಲ್ ಹೇಳಿದರು.
ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಇಲ್ಲ ಎಂದು ದೂರಿದ ರಾಹುಲ್ ಗಾಂಧಿ, ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ಆರೆಸ್ಸೆಸ್ ನಿಯಂತ್ರಿಸುತ್ತದೆ. ಇದರ ಜತೆಗೆ ಮಾಧ್ಯಮಗಳನ್ನು ಮತ್ತು ತನಿಖಾ ಸಂಸ್ಥೆಗಳನ್ನೂ ನಿಯಂತ್ರಿಸಲಾಗುತ್ತದೆ ಎಂದು ನಾವು ಆರೋಪಿಸುತ್ತ ಬರುತ್ತಿದ್ದೇವೆ. ಆದರೆ ಜನರಿಗೆ ನಮ್ಮ ಕಳಕಳಿ ಅರ್ಥವಾಗುತ್ತಿಲ್ಲ ಎಂದರು.