ನವದೆಹಲಿ: ಕೊನೆಗೆ ಸರಣಿ ಸಭೆಯ ಬಳಿಕ ಕರ್ನಾಟಕ ಚುನಾವಣೆಗೆ (Karnataka Election 2023) ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 35 ಕ್ಷೇತ್ರಗಳನ್ನು ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ.
ಕಳೆದ ಮೂರು ದಿನಗಳಿಂದ ಬಿಜೆಪಿ ಹೈಕಮಾಂಡ್ (BJP High Command) ಸರಣಿ ಸಭೆ ನಡೆಸುತ್ತಿತ್ತು. ಈ ಬಾರಿ ಬಿಜೆಪಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ನಾಯಕರು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ.
ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಜಾಪ್ರಭುತ್ವ ಪಕ್ಷವಾಗಿ ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. 31 ಜಿಲ್ಲೆಯಲ್ಲೂ ಅಭಿಪ್ರಾಯ ಪಡೆದಿದೆ. 25,೦೦೦ ಸ್ವಯಂ ಸೇವಕರು ಕೆಲಸ ಮಾಡಿದ್ದಾರೆ. ಜಿಲ್ಲಾ ನಾಯಕರಿಂದಲೂ ಅಭಿಪ್ರಾಯ ಪಡೆಯಲಾಗಿದೆ. ಎಲ್ಲ ರಾಷ್ಟ್ರೀಯ ಪ್ರಮುಖ ನಾಯಕರ ಇನ್ ಪುಟ್ ಪಡೆದುಕೊಂಡಿದೆ ಎಂದರು.
189 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತಿದ್ದೇವೆ. ಯುವ, ಹೊಸತನ, ಹೊಸ ಯೋಚನೆ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆಯಾಗಿದೆ. ಹೊಸ ಪೀಳಿಗೆಯನ್ನು ವಿಧಾನಸಭೆ ಸಭೆಯಲ್ಲಿ ನೋಡುವ ಪ್ರಯತ್ನ ಬಿಜೆಪಿ ಮಾಡಿದೆ ಎಂದು ಹೇಳಿದರು.
ಸುರೇಶ್ ಕುಮಾರ್ ಹಾಗೂ ರವಿ ಸುಬ್ರಹ್ಮಣ್ಯ ಗೂ ಟಿಕೆಟ್ ನೀಡಲಾಗಿದೆ. 52 ಹೊಸ ಮುಖಗಳಿಗೆ ಮಣೆ ಹಾಕಿದ್ದು, ಹಳೆ ನಾಯಕರೊಂದಿಗೆ ಸಮನ್ವಯ ಮಾಡಿದೆ. ಓಬಿಸಿಗೆ 32, 30 SC, 16 ST, 9 ಡಾಕ್ಟರ್, ಓರ್ವ ನಿವೃತ ಐಎಎಸ್ ಅಧಿಕಾರಿ, 1 ನಿವೃತ್ತ ಐಪಿಎಸ್ ಐವರು ವಕೀಲರು, ಮೂರು ಶೈಕ್ಷಣಿಕ ಹಿನ್ನೆಲೆ, 8 ಮಂದಿ ಮಹಿಳೆಯರು ಟಿಕೆಟ್ ನೀಡಲಾಗಿದೆ.
ಭಾನುವಾರ ಮೈಸೂರಿನ ಕಾರ್ಯಕ್ರಮ ಮುಗಿಸಿ ದೆಹಲಿಗೆ ತೆರಳಿದ ಬಳಿಕ ಪ್ರಧಾನಿ ಮೋದಿ, ಜೆಪಿ ನಡ್ಡಾ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಭೆ ನಡೆದಿತ್ತು. ಈ ವೇಳೆ ರಾಜ್ಯ ನಾಯಕರು ತಂದ ಸಮೀಕ್ಷಾ ವರದಿ ಮತ್ತು ಅಭ್ಯರ್ಥಿಗಳ ಪಟ್ಟಿಯನ್ನು ನೋಡಿ ಮೋದಿ ಅಸಮಾಧಾನಗೊಂಡಿದ್ದರು.
ಹಲವು ನಾಯಕರು ಪುತ್ರರಿಗೆ ಟಿಕೆಟ್ ಕೇಳಿದ ಹಿನ್ನೆಲೆಯಲ್ಲಿ ಕೆಲ ಕ್ಷೇತ್ರಗಳಿಗೆ ಪುತ್ರರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಈ ನಾಯಕರ ನಡೆಯನ್ನು ಕಂಡು ಅಸಮಾಧಾನಗೊಂಡ ಮೋದಿ (PM Narendra Modi), ಕುಟುಂಬ ರಾಜಕಾರಣ ವಿರುದ್ಧ ಮಾತನಾಡುವ ನಾವೇ ನಾಯಕರ ಮಕ್ಕಳಿಗೆ ಟಿಕೆಟ್ ನೀಡಿದರೆ ಹೇಗೆ ಖಾರವಾಗಿ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೇ ನೀವು ಮಾಡಿದ ಎಲ್ಲಾ ಸಮೀಕ್ಷೆಗಳು ಪ್ರಮುಖ ನಾಯಕರ ಪರವೇ ಯಾಕಿದೆ ಎಂದು ಕೇಳಿದ್ದರು.