ಬೆಂಗಳೂರು: ಬ್ಯಾಡರಹಳ್ಳಿಯ ಲಿಂಗಧೀರನಹಳ್ಳಿಯಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್ ನಲ್ಲಿ ಅಗ್ನಿ ಅವಘಡದಲ್ಲಿ ಕಂಡಕ್ಟರ್ ಸಜೀವ ದಹನವಾದ ಪ್ರಕರಣವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅನುಮಾನಗಳು ಉದ್ಭವಿಸಿವೆ.
ಬಸ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಆಕಸ್ಮಿಕವೋ ಅಥವಾ ಕೊಲೆಯೋ ಎನ್ನುವ ಅನುಮಾನಗಳು ಹುಟ್ಟುಕೊಂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಬಸ್ ಡ್ರೈವರ್ ಪ್ರಕಾಶ್ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಡ್ರೈವರ್ ಪ್ರಕಾಶ್ ಪೊಲೀಸ್ ವಿಚಾರಣೆಯಲ್ಲಿ ಹೇಳಿದ್ದಾರೆ. ಆದ್ರೆ ರಾತ್ರಿ 10:30ಕ್ಕೆ ನಿಲ್ಲಿಸಿದ್ದ ಬಸ್ ನಲ್ಲಿ ಮುಂಜಾನೆ 4:40ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಇಂಜನ್ ಆನ್ನಲ್ಲಿ ಇದ್ರೆ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ಹೊತ್ತಿಕೊಳ್ಳುತ್ತೆ. ಆದರೆ ಇಂಜಿನ್ ಬಂದ್ ಆಗಿ ನಿಂತಿದ್ದ ಬಸ್ನಲ್ಲಿ ಶಾರ್ಟ್ ಸರ್ಕ್ಯೂಟ್ ಹೇಗಾಯ್ತು ಎನ್ನುವ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.