ಕೇಶವ ಮೂರ್ತಿ ನಿರ್ದೇಶಕದ ಹಿಟ್ಲರ್ ಕಲ್ಯಾಣ್ ಧಾರವಾಹಿ ಖ್ಯಾತಿ ನಟ ದಿಲೀಪ್ ರಾಜ್ ನಟನೆಯ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಇಂದು ರಿಲೀಸ್ ಆಗಿಲಿದೆ. ಆದ್ರೆ ಈ ಮಧ್ಯೆ ಚಿತ್ರತಂಡದ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿ ಕೇಸ್ ದಾಖಲಿಸಿದೆ.
ಸಿನಿಮಾ ಶೂಟಿಂಗ್ ಎಂದು ಬಸ್ ಬಾಡಿಗೆ ಪಡೆದು ಸಂಸ್ಥೆಯ ವಿರುದ್ಧವೇ ವಿಡಿಯೋ ಚಿತ್ರಣ ಮಾಡಿರುವ ಆರೋಪ ಚಿತ್ರತಂಡ ವಿರುದ್ಧ ಕೇಳಿ ಬಂದಿದೆ. ವಿಡಿಯೋದಲ್ಲಿ ಬಿಎಂಟಿಸಿ ಬಸ್ನಿಂದ ಆಕ್ಸಿಡೆಂಟ್ ಆಗ್ತಿದೆ ಎಂದು ಸಿನಿಮಾ ತಂಡ ಅಪಪ್ರಚಾರ ಮಾಡಿದೆ ಅಂತಾ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಆರೋಪಿಸಿದೆ.
ಬಸ್ನಲ್ಲಿ ‘ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಒಂದು ದಿನಕ್ಕೆ ಹದಿನೈದು ಸಾವಿರ ರುಪಾಯಿ ಅಂತೆ ಬಸ್ ಬಾಡಿಗೆ ಪಡೆದು ಚಿತ್ರೀಕರಣ ಮಾಡಿದೆ. ಬನಶಂಕರಿ ಡಿಪೋ-20ಕ್ಕೆ ಸೇರಿದ KA-57F4274 ಬಸ್ ಸಿನಿಮಾ ಶೂಟಿಂಗ್ಗಾಗಿ ಪಡೆದುಕೊಂಡಿದ್ದರು. ನಮ್ಮ ಬಸ್ಸಿನ ಹಿಂಭಾಗದಲ್ಲಿ ಸಿನಿಮಾ ತಂಡ ಪೋಸ್ಟರ್ ಅಂಟಿಸಿದೆ. ಆ ಪೋಸ್ಟರ್ ನೋಡಿಕೊಂಡು ಬಂದು ವಾಹನ ಸವಾರರು ಡಿಕ್ಕಿ ಹೊಡೆಯುತ್ತಿದ್ದಾರೆ ಎಂಬ ಸಂದೇಶವುಳ್ಳ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡ ಹಂಚಿಕೊಂಡಿದೆ.
ಪೋಸ್ಟರ್ ನೋಡಿಕೊಂಡು ಬಂದು ಪ್ರತಿದಿನ ವಾಹನ ಸವಾರರು ಡಿಕ್ಕಿ ಹೊಡೆಯುತ್ತಿದ್ದಾರೆ ಅಂತಾ ಚಿತ್ರತಂಡ ಜನರಿಗೆ ತಪ್ಪು ಮಾಹಿತಿ ನೀಡಿದೆ. ಬಸ್ ಹಿಂಭಾಗದಲ್ಲಿ ಕಾರು ಚಾಲಕ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ನಂತರ ಬಿಎಂಟಿಸಿ ಡ್ರೈವರ್ಗೆ ಕಾರು ಚಾಲಕ ಕೊರಳಪಟ್ಟಿ ಹಿಡಿದು ಎಳೆದಾಡುತ್ತಿರುವ ರೀತಿಯಲ್ಲಿ ವಿಡಿಯೋ ಮಾಡಲಾಗಿದೆ. ಬಿಎಂಟಿಸಿ ಬೆಂಗಳೂರು ನಾಗರಿಕರಿಗೆ ಉತ್ತಮ ಸೇವೆ ನೀಡುತ್ತಿದೆ.
ಜಾಹೀರಾತುಗಳಿಂದ ಯಾವುದೇ ಆ್ಯಕ್ಸಿಡೆಂಟ್ ಆಗಿರುವ ಪ್ರಕರಣಗಳು ದಾಖಲಾಗಿಲ್ಲ. ಹೀಗಿರುವ ಈ ಚಿತ್ರವು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಡಿಯೋದಿಂದ ಸಾರ್ವಜನಿಕರಲ್ಲಿ ಬಿಎಂಟಿಸಿ ಮೇಲೆ ಕೆಟ್ಟು ಅಭಿಪ್ರಾಯ ಮೂಡುವಂತೆ ಮಾಡಿದೆ. ವಿಡಿಯೋ ತುಣಕನ್ನು ತಕ್ಷಣವೇ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಬೇಕು ಎಂದು ಬಿಎಂಟಿಸಿ ಆಗ್ರಹಿಸಿದೆ. ಶ್ರೀ ಗುರುಪ್ರಸಾದ್ ಜಿಎನ್ ಪಿಚ್ಚರ್ ಶಾಪ್ ಹಾಗೂ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದರ ವಿರುದ್ಧ ದೂರು ನೀಡಲಾಗಿದೆ.