ಬೆಂಗಳೂರು:-ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿದರೆ ಭಾರಿ ಮೊತ್ತದ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಇದರ ಜೊತೆಗೆ ಜೈಲು ಸೇರುವುದು ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕು ಎಂದು ಸರ್ಕಾರ ಹೇಳಿದೆ.
ಸರ್ಕಾರ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ₹10 ಕೋಟಿ ದಂಡ ಮತ್ತು 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಸಾರ್ವಜನಿಕ ಪರೀಕ್ಷಾ ಮಸೂದೆ-2023ಕ್ಕೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.
ಹಾಗಾಗಿ ಇನ್ನು ಮುಂದೆ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದವರು ಕೋಟಿಗಟ್ಟಲೆ ರೂಪಾಯಿ ದಂಡ ಕಟ್ಟಬೇಕಲ್ಲದೆ, ಹತ್ತು ವರ್ಷ ಜೈಲಿಗೂ ಹೋಗಬೇಕಾಗುತ್ತದೆ. ಈ ಹೊಸ ಕಾನೂನಿಗೆ ರಾಜ್ಯಪಾಲರ ಅಂಕಿತ ಬಿದ್ದಿರುವುದರಿಂದ ಶೀಘ್ರವೇ ರಾಜ್ಯದಲ್ಲಿ ಜಾರಿಯಾಗಲಿದೆ.
ರಾಜ್ಯದಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿದ್ದ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಭಾರಿ ಅಕ್ರಮಗಳು ನಡೆದಿದ್ದವು. ಪಿಎಸ್ಐ ಪರೀಕ್ಷೆ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳಲ್ಲೂ ಅಕ್ರಮ ನಡೆದಿದ್ದವು. ಹೀಗಾಗಿ ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿತ್ತು.
ಪರೀಕ್ಷೆಯಲ್ಲಿ ಕಾಪಿ ಮಾಡುವುದು, ಪ್ರಶ್ನೆಪತ್ರಿಕೆಗಳ ಸೋರಿಕೆಯಾಗುವುದು, ಉತ್ತರ ಪತ್ರಿಕೆ ಮತ್ತು ಒಎಂಆರ್ ಹಾಳೆಗಳನ್ನು ತಿದ್ದುವುದು, ಪರೀಕ್ಷೆ ವೇಳೆ ಉಪಕರಣ ಬಳಸುವುದು, ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಪ್ರವೇಶ, ಪರೀಕ್ಷಾ ಅಭ್ಯರ್ಥಿ ಬೇರೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಯತ್ನಿಸುವುದು, ಪ್ರಶ್ನೆಪತ್ರಿಕೆ ಲೀಕ್ ಮಾಡುವುದು, ಸೋರಿಕೆಗೆ ಪ್ರಯತ್ನಿಸುವುದು, ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ತರಿಸಿಕೊಳ್ಳುವುದು ಸೇರಿದಂತೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಲಾಗಿದೆ.
ಒಂದು ವೇಳೆ ಪರೀಕ್ಷಾ ಅಕ್ರಮದಲ್ಲಿ ಯಾವುದೇ ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿ ಭಾಗಿಯಾದರೆ, ಆ ಪರೀಕ್ಷೆಯ ಸಂಪೂರ್ಣ ವೆಚ್ಚವನ್ನು ಅಂತಹ ಸಂಸ್ಥೆ ಅಥವಾ ಆಡಳಿತ ಮಂಡಳಿಯಿಂದಲೇ ವಸೂಲಿ ಮಾಡಲು ಈ ಕಾಯ್ದೆ ನೆರವಾಗಲಿದೆ.