ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಬಿಗ್ ಬಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಬಳಿಕ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಅಮಿತಾಬ್ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಪಕ್ಕೆಲುಬಿನ ಕಾರ್ಟಿಲೇಜ್ ಮುರಿದಿದೆ, ಹೈದರಾಬಾದ್ ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮುಂಬೈನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಗಾಯವು ತೀವ್ರ ನೋವಿನಿಂದ ಕೂಡಿದ್ದು ನಡೆದಾಡಲು ಕಷ್ಟವಾಗಿದೆ ಮತ್ತು ಉಸಿರಾಟದ ಸಮಸ್ಯೆಯೂ ಇದೆ. ಅದಾಗ್ಯೂ ಯಾವುದೇ ತೊಂದರೆಗಳಿಲ್ಲ, ಚೇತರಿಕೆ ಕಾಣಲು ಹಲವು ವಾರಗಳ ಸಮಯ ಬೇಕಾಗಬಹುದು ಹೀಗಾಗಿ ಯಾವ ಹಿತೈಷಿಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ, ಮನೆಯ ಬಳಿ ಯಾರು ಬರಬೇಡಿ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ಅವರು ತಮ್ಮ ಪೊಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ವೈಜಯಂತಿ ಮೂವೀಸ್ ತಂಡ ಟ್ವೀಟ್ ಮಾಡಿದ್ದು, 5 ದಶಕಗಳಿಗೂ ಹೆಚ್ಚು ಕಾಲ ಮನರಂಜನೆ ನೀಡಿದ ಶಕ್ತಿಕೇಂದ್ರ ನೀವು, ಈ ಬಾರಿ ಬಿಡುಗಡೆ ಮಾಡಿದ ಹೊಸ ಅವತಾರವನ್ನು ಜಗತ್ತಿಗೆ ತೋರಿಸಲು ಕಾಯಲು ಸಾಧ್ಯವಿಲ್ಲ. ಶಕ್ತಿ ಯಾವಾಗಲೂ ನಿಮ್ಮೊಂದಿಗೆ ಇರಲಿ ಮತ್ತು ನೀವು ನಮ್ಮ ಹಿಂದಿರುವ ಶಕ್ತಿ ಎಂದು ಹೇಳಿದೆ.