ಕಿರುತೆರೆ ಖ್ಯಾತ ‘ಶಕ್ತಿಮಾನ್’ ಧಾರಾವಾಹಿ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಯೋಜನೆ ರೂಪಿಸಲಾಗಿದೆ. ಶಕ್ತಿಮಾನ್ ಧಾರವಾಹಿಯನ್ನು ಸಿನಿಮಾ ಮಾಡುವ ಕುರಿತು ಈ ಹಿಂದೆಯೇ ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಆದರೆ ಇದುವರೆಗೂ ಸಿನಿಮಾ ಆರಂಭವಾಗಿಲ್ಲ. ಈ ಬಗ್ಗೆ ಮಾತನಾಡಿರುವ ನಟ ಮುಕೇಶ್ ಖನ್ನಾ ಸಿನಿಮಾ ತಡವಾಗಲು ಅಸಲಿ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.
1993ರಲ್ಲಿ ಇಂಡಿಯನ್ ಸೂಪರ್ ಹೀರೋ ಆಗಿ ಮುಖೇಶ್ ಖನ್ನಾ ಮಿಂಚಿದ್ದರು. ಮಕ್ಕಳಿಗಂತೂ ‘ಶಕ್ತಿಮಾನ್’ ಎಂದರೆ ಎಲ್ಲಿಲ್ಲದ ಪ್ರೀತಿ. ಆತನ ಸಾಹಸಗಳು ಒಂದೆರಡಲ್ಲ. ಈಗ ಈ ಸೂಪರ್ ಹೀರೋ ಪಾತ್ರವನ್ನೇ ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಸಿದ್ಧವಾಗುತ್ತಿದೆ. ಶಕ್ತಿಮಾನ್ ಸಿನಿಮಾದ ಬಜೆಟ್ 200-300 ಕೋಟಿ ರೂಪಾಯಿ ನಿರ್ಮಾಣವಾಗಲಿದ್ದು, ‘ಸ್ಪೈಡರ್ ಮ್ಯಾನ್’ ಸಿನಿಮಾ ಮಾಡಿದ್ದ ಸೋನಿ ಪಿಕ್ಚರ್ಸ್ ಸಂಸ್ಥೆಯವರು ಶಕ್ತಿಮಾನ್ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಮೊದಲು ಕೊರೊನಾ ಬಂತು. ಅದರಿಂದ ವಿಳಂಬ ಆಯಿತು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ.
ಇದು ದೊಡ್ಡ ಸಿನಿಮಾ ಆದ್ದರಿಂದ ಸಮಯ ಹಿಡಿಯುತ್ತದೆ. ನಾನು ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನಾ ಎಂಬುದು ದೊಡ್ಡ ಪ್ರಶ್ನೆ. ಬೇರೆ ಯಾರಾದರೂ ಶಕ್ತಿಮಾನ್ ಪಾತ್ರ ಮಾಡುತ್ತಾರಾ? ಆ ಬಗ್ಗೆ ನನಗೆ ತಿಳಿದಿಲ್ಲ. ಇದೊಂದು ಕಮರ್ಷಿಯಲ್ ಸಿನಿಮಾ. ದುಡ್ಡಿನ ಮಾತುಕತೆ ಸಾಕಷ್ಟು ಇರುತ್ತದೆ. ಈ ಸಿನಿಮಾದಲ್ಲಿ ನಾನು ಇರುತ್ತೇನೆ. ನನ್ನನ್ನು ಬಿಟ್ಟು ಈ ಸಿನಿಮಾ ಮಾಡೋಕೆ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದು ನಟ ಮುಖೇಶ್ ಖನ್ನಾ ಸಿನಿಮಾದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಿನಿಮಾದಲ್ಲಿ ಮುಕೇಶ್ ಖನ್ನಾ ಇರಲಿದ್ದು ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ. ಇದು ನಿರ್ಮಾಪಕರ ನಿರ್ಧಾರವಾಗಿರಲಿದ್ದು, ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು ಎಂದು ಮುಕೇಶ್ ಖನ್ನಾ ಹೇಳಿದ್ದಾರೆ. ರಣವೀರ್ ಸಿಂಗ್ ಶಕ್ತಿಮಾನ್ ಆಗಿ ಕಾಣಿಸಿಕೊಳ್ಳಬಹುದು ಎಂಬ ಸುದ್ದಿ ಹರಿದಾಡುತ್ತಿದೆ.