ಮಾಜಿ ಗಗನಸಖಿ, ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನಲ್ಲಿರುವ ನಟಿಯ ಅಪಾರ್ಟ್ಮೆಂಟ್ನಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಕ್ಕಪಕ್ಕದ ಮನೆಯವರು ನೀಡಿದ ದೂರನ್ನು ಆಧಾರಿಸಿ ಅಪಾರ್ಟ್ ಮೆಂಟ್ ಗೆ ಬಂದ ಪೊಲೀಸರು ಮೊದಲು ಬಾಗಿಲು ಬಡಿದಿದ್ದಾರೆ.ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಬಾಗಿಲು ಒಡೆದು ಒಳಹೋಗಿದ್ದಾರೆ. ಈ ವೇಳೆ ನೂರ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
2023ರಲ್ಲಿ ಬಿಡುಗಡೆಗೊಂಡಿದ್ದ ‘ದಿ ಟ್ರಯಲ್‘ ವೆಬ್ ಸರಣಿಯಲ್ಲಿ ನಟಿ ಕಾಜೋಲ್ ಜತೆ ಮಾಲಾಬಿಕಾ ದಾಸ್ ನಟಿಸಿದ್ದರು. 31 ವರ್ಷದ ನೂರ್ ಮಾಲಾಬಿಕಾ ದಾಸ್ ಖಿನ್ನತೆಯಿಂದ ಬಳಲುತ್ತಿದ್ದರು. ಈ ಸಂಬಂಧ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಸ್ಸಾಂ ಮೂಲದ ಮಾಲಾಬಿಕಾ ತನ್ನ ವೃತ್ತಿಜೀವನವನ್ನು ಗಗನಸಖಿಯಾಗಿ ಪ್ರಾರಂಭಿಸಿರು. ನಟನೆಯ ಆಸಕ್ತಿಯಿಂದ ಅವರು ಅನೇಕ ವಯಸ್ಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಆಕೆಯ ಸಾವಿಗೆ ಎರಡು ವಾರಗಳ ಮೊದಲು ಕುಟುಂಬ ಸದಸ್ಯರು ಮುಂಬೈನಲ್ಲಿರುವ ನಟಿಯ ನಿವಾಸಕ್ಕೆ ಭೇಟಿ ನೀಡಿದ್ದರು.ಆದರೆ, ಆಕೆಯ ಸಾವಿನ ನಂತರ ಕುಟುಂಬಸ್ಥರು ಮೃತ ದೇಹವನ್ನು ನೋಡಲು ಸಹ ಬಂದಿಲ್ಲ.ಮೃತ ದೇಹವನ್ನು ತೆಗೆದುಕೊಂಡು ಹೋಗುವಂತೆ ಪೊಲೀಸರು ಕರೆ ಮಾಡಿದರೂ ಪ್ರತಿಕ್ರಿಯಿಸಿಲ್ಲ. ಎನ್ ಜಿ ಒ ಸಹಾಯದಿಂದ ಆಕೆಯ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗಿದೆ ಎಂದು ವರದಿಯಾಗಿದೆ.