ನಟಿ ಕಾಜಲ್ ಅಗರ್ವಾಲ್ ಉತ್ತರ ಭಾರತವಾದರೂ ನಟಿಯಾಗಿ ಗುರುತಿಸಿಕೊಂಡಿದ್ದು ದಕ್ಷಿಣ ಭಾರತದಲ್ಲಿ. 2007ರಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಕಾಜಲ್ ಅಗರ್ವಾಲ್ ತೆಲುಗು ಹಾಗೂ ತಮಿಳಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ ಮದುವೆಯಾದ ನಟಿಯರಿಗೆ ದಕ್ಷಿಣ ಚಿತ್ರರಂಗಕ್ಕಿಂತ ಬಾಲಿವುಡ್ ಬೆಸ್ಟ್ ಎಂದಿದ್ದಾರೆ.
2 ವರ್ಷಗಳ ಹಿಂದೆ ಉದ್ಯಮಿ ಗೌತಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಬಳಿಕ ಚೊಚ್ಚಲ ಮಗುವನ್ನು ಕೂಡ ಬರಮಾಡಿಕೊಂಡರು. ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ನಟಿಗೆ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿಲ್ಲವಂತೆ. ಬರೀ ಮಹಿಳಾ ಪ್ರಧಾನ, ಪತ್ತೆಧಾರಿ ಕಥೆಗಳು ಅವರನ್ನು ಅರಸಿ ಬರುತ್ತಿವೆಯಂತೆ. ಹಾಗಾಗಿ ಈ ಬಗ್ಗೆ ನಟಿ ಅಸಮಾಧಾನ ಹೊರಹಾಕಿದ್ದಾರೆ.
ಬಾಲಿವುಡ್ನಲ್ಲಿ ಮದುವೆಯಾದ ನಟಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ. ದೀಪಿಕಾ ಪಡುಕೋಣೆಗೆ ‘ಫೈಟರ್’ ಅಂಥಹಾ ಆಕ್ಷನ್-ರೊಮ್ಯಾಂಟಿಕ್ ಪಾತ್ರ ಸಿಗುತ್ತದೆ. ಆಲಿಯಾ ಭಟ್ಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಅಂಥಹಾ ರೊಮ್ಯಾಂಟಿಕ್ ಸಿನಿಮಾಗಳು ಸಿಗುತ್ತಿವೆ. ಆದರೆ ದಕ್ಷಿಣ ಭಾರತದಲ್ಲಿ ಈ ಪರಿಸ್ಥಿತಿ ಇಲ್ಲ. ನಟಿ ಮದುವೆಯಾದ ಕೂಡಲೇ ಆಕೆಗೆ ರೊಮ್ಯಾಂಟಿಕ್ ಪಾತ್ರಗಳು, ಮುಖ್ಯ ನಾಯಕಿಯ ಪಾತ್ರಗಳು ಸಿಗುವುದು ನಿಂತೇ ಹೋಗುತ್ತವೆ. ಈ ವಿಷಯದಲ್ಲಿ ದಕ್ಷಿಣ ಭಾರತ ಚಿತ್ರರಂಗಕ್ಕಿಂತಲೂ ಬಾಲಿವುಡ್ ಬೆಸ್ಟ್ ಎಂದಿದ್ದಾರೆ ಕಾಜಲ್ ಅಗರ್ವಾಲ್.
‘ಮದುವೆಯಾಗಿ, ಮಕ್ಕಳಾದ ಎಷ್ಟೋ ನಟಿಯರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಪಾತ್ರಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಆದರೆ ಬಾಲಿವುಡ್ನಲ್ಲಿ ಆ ರೀತಿಯ ಸ್ಥಿತಿ ಇಲ್ಲ. ದಕ್ಷಿಣ ಭಾರತದಲ್ಲಿ ಸ್ಟಿರಿಯೋಟೈಪ್ ಕಾಸ್ಟಿಂಗ್ ಮಾಡಲಾಗುತ್ತದೆ. ಆ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಹೇಮಾ ಮಾಲಿನಿ, ಶರ್ಮಿಳಾ ಠಾಗೋರ್ ಅಂಥಹವರು ವರ್ಷಗಳು ಕಳೆದರು ನಾಯಕಿಯರಾಗಿ ನಟಿಸಿದ್ದರು. ದಕ್ಷಿಣ ಭಾರತದಲ್ಲಿ ನಟಿ ನಯನತಾರಾ ಈಗಲೂ ಸಹ ತಮ್ಮದೇ ರೀತಿಯ ರೊಮ್ಯಾಂಟಿಕ್, ಆಕ್ಷನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕಾಜಲ್ ಅಗರ್ವಾಲ್ ಪ್ರಸ್ತುತ ‘ಸತ್ಯಭಾಮ’ ಹೆಸರಿನ ಸಿನಿಮಾದಲ್ಲಿ ಎಸಿಪಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಪತ್ತೆಧಾರಿ ಮತ್ತು ಆಕ್ಷನ್ ಭರಿತ ಕತೆಯಾಗಿದೆ. ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ಉಮಾ’ ಹೆಸರಿನ ಹಿಂದಿ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.