ಮಹಾರಾಷ್ಟ್ರ ಮಾಜಿ ಸಚಿವ, ಬಾಲಿವುಡ್ ಚಿತ್ರರಂಗದ ಹಲವು ಸ್ಟಾರ್ ಗಳ ಜೊತೆ ಆಪ್ತತೆ ಹೊಂದಿದ್ದ ಎನ್ಸಿಪಿ ಹಿರಿಯ ನಾಯಕ ಬಾಬಾ ಸಿದ್ಧಕಿ ಅವರನ್ನು ಬಾಂದ್ರಾ ಈಸ್ಟ್ ಮುಂಬೈನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಾಬಾ ಸಿದ್ಧಕಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು ಕೂಡಲೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಬಾ ಸಿದ್ದಿಕಿ ನಿಧನರಾಗಿದ್ದಾರೆ.
ಇಫ್ತಾರ್ ಕೂಟ ಹಾಗೂ ಅದ್ಧೂರಿ ಪಾರ್ಟಿಗಳ ಹೆಸರಲ್ಲಿ ಸಿನಿಮಾ ರಂಗದ ದೈತ್ಯರನ್ನೆಲ್ಲ ಒಂದೆಡೆ ಸೇರಿಸುತ್ತಿದ್ದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಪ್ರತಿಯೊಬ್ಬರಿಗೂ ಶಾಕ್ ನೀಡಿದೆ.
ಶನಿವಾರ ರಾತ್ರಿ 9.30 ಗಂಟೆ ಸುಮಾರಿಗೆ ಬಾಬಾ ಸಿದ್ಧಿಕಿ ಅವರ ಮೇಲೆ ಮೂರು ಬುಲೆಟ್ಗಳನ್ನು ಹಾರಿಸಲಾಗಿತ್ತು. ಅವರ ಮಗ ಜೀಶನ್ ಸಿದ್ದಿಕಿ ಅವರ ಕಚೇರಿಯಲ್ಲಿ ಈ ದಾಳಿ ನಡೆದಿತ್ತು. ಜೀಶನ್ ಬಾಂದ್ರಾ ಪೂರ್ವದ ಶಾಸಕರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಕನಿಷ್ಠ ಒಂದು ಬುಲೆಟ್ ಅವರ ಎದೆಯ ಒಳಗೆ ಹೊಕ್ಕಿತ್ತು. ಅವರಿಗೆ ನಿರಂತರವಾಗಿ ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (ಸಿಪಿಆರ್) ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಾಬಾ ಸಿದ್ಧಿಕಿ ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ಕೈ ಪಾಳಯ ತೊರೆದು ಅಜಿತ್ ಪವಾರ್ ಅವರ ಎನ್ಸಿಪಿ ಬಣ ಸೇರಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಜೀಶನ್ ಸಿದ್ದಿಕಿ ಅವರನ್ನು ಕಾಂಗ್ರೆಸ್ ಆಗಸ್ಟ್ನಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.
ಮಹಾರಾಷ್ಟ್ರದಲ್ಲಿ ರಾಜಕೀಯ ಕಾರಣಕ್ಕೆ ಬಾಬಾ ಸಿದ್ಧಿಕಿ ಪರಿಚಿತರಾದರೂ, ರಾಜ್ಯದ ಹೊರಗಡೆ ಅದ್ಧೂರಿ ಪಾರ್ಟಿಗಳಿಗೆ ಜನಪ್ರಿಯರಾಗಿದ್ದರು. ಬಾಲಿವುಡ್ ಸೇರಿದಂತೆ ದೇಶದ ಚಿತ್ರರಂಗದ ಹೆಚ್ಚು ಕಡಿಮೆ ಎಲ್ಲಾ ದೊಡ್ಡ ದೊಡ್ಡ ಸ್ಟಾರ್ಗಳ ಜತೆಯೂ ವಿಶೇಷ ನಂಟು ಹೊಂದಿದ್ದ ಅವರು, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ನಡುವೆ ನಡೆಯುತ್ತಿದ್ದ ಶೀತಲ ಸಮರವನ್ನು 2023ರ ಇಫ್ತಾರ್ ಕೂಟದಲ್ಲಿ ಬಗೆಹರಿಸಿದ್ದರು.