ಲಾಸ್ ಏಂಜಲಿಸ್: ಅಮೆರಿಕದಲ್ಲಿ ಉಂಟಾದ ಭೀಕರ ಬಿರುಗಾಳಿಗೆ ಜನಜೀವನ ಮತ್ತಷ್ಟು ಅಸ್ತವ್ಯಸ್ತಗೊಂಡಿದೆ. ‘ಬಾಂಬ್ ಸೈಕ್ಲೋನ್’ ಆರ್ಭಟದಿಂದ ಕ್ಯಾಲಿಫೋರ್ನಿಯಾದಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಐವರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರ ಹಾಗೂ ಕೊಂಬೆಗಳು ಮುರಿದು ಬಿದ್ದ ಪರಿಣಾಮ ನಾಲ್ವರು ಸೇರಿದಂತೆ ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶದಲ್ಲಿ ಕನಿಷ್ಠ ಐವರು ಅಸುನೀಗಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಓಕ್ಲಾಂಡ್ನಲ್ಲಿ ಲೇಕ್ ಮೆರಿಟ್ ಪಕ್ಕದಲ್ಲಿ ಟೆಂಟ್ನಲ್ಲಿದ್ದ ವ್ಯಕ್ತಿ ಮೇಲೆ ಮರವೊಂದು ಬಿದ್ದು ಮೃತಪಟ್ಟಿದ್ದು, ಇನ್ನಿಬ್ಬರು ಮರ ಬಿದ್ದು ಜೀವ ಕಳೆದುಕೊಂಡಿದ್ದಾರೆ. ಸ್ಯಾನ್ ಹೋಸ್ ನಿವಾಸಿಯೊಬ್ಬರ ವ್ಯಾನ್ ಮೇಲೆ ಮರ ಬಿದ್ದು ಮೃತಪಟ್ಟಿದ್ದಾರೆ. ಇನ್ನೂ ನಾಲ್ವರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಬಾಂಬ್ ಸೈಕ್ಲೋನ್ ಎಂದೇ ಕರೆಯಲಾಗುವ ಭಾರಿ ಬಿರುಗಾಳಿಯಿಂದ ಕೂಡಿದ ಮಳೆಯು ಕಡಿಮೆ ಒತ್ತಡದ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ. ನಗರಗಳುದ್ದಕ್ಕೂ ಮರಗಳು ಉರುಳಿರುವುದರಿಂದ ರಸ್ತೆಗಳು ಬ್ಲಾಕ್ ಆಗಿವೆ. ಜತೆಗೆ ಪ್ರವಾಹ ಹಾಗೂ ಅವಶೇಷಗಳ ರಾಶಿಯಿಂದಾಗಿ ಸಂಚಾರ ವ್ಯವಸ್ಥೆಗೆ ತೊಡಕು ಉಂಟಾಗಿದೆ. ಹಾಗೆಯೇ ಹಲವಾರು ವಾಹನಗಳಿಗೆ ಹಾನಿಗೊಳಗಾಗಿವೆ.
ಕ್ಯಾಲಿಫೋರ್ನಿಯಾದ ಅನೇಕ ಬೀದಿಗಳು ಈಗಲೂ ಜಲಾವೃತವಾಗಿದ್ದು, 700ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿವೆ ಎಂದು ಟುಲಾರೆ ಕೌಂಟಿಯ ಎಮರ್ಜೆನ್ಸಿ ಆಪರೇಷನ್ ಕೇಂದ್ರದ ವಕ್ತಾರ ಕೇರಿ ಮಾಂಟೀರೊ ತಿಳಿಸಿದ್ದಾರೆ.