ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಿಎಂಗಳ ಬಗ್ಗೆ ನೀಡಿದ ಹೇಳಿಕೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಬಹಳ ಸ್ಪಷ್ಟವಾಗಿ ತಮ್ಮ ಹೇಳಿಕೆ ನೀಡಿದ್ದು, ಲಿಂಗಾಯತ ಸಮುದಾಯದಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಉತ್ತಮ ಕೊಡುಗೆಗಳನ್ನು ನೀಡಿರುವವರ ಬಗ್ಗೆ ನನಗೆ ಬಹಳ ಗೌರವವಿದೆ. ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್, ನಿಜಲಿಂಗಪ್ಪ ಅವರು ಲಿಂಗಾಯತ ಸಮುದಾಯದಿಂದ ಬಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ.
ಆದರೆ ದುರಾದೃಷ್ಟವಶಾತ್, ಬಸವರಾಜ ಬೊಮ್ಮಾಯಿ ಅವರು ಅವರದೇ ಪಕ್ಷ ಶಾಸಕ ನೆಹರೂ ಓಲೇಕರ್ ಅವರ ಪ್ರಕಾರ 40% ಕಮಿಷನ್ ಏಜೆಂಟ್ ಆಗಿದ್ದಾರೆ. ಈ ಆರೋಪ ನಾವು ಮಾಡಿಲ್ಲ. ನೆಹರೂ ಓಲೇಕರ್ ಹೇಳಿರುವುದನ್ನು ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ, ಅದರಲ್ಲಿ ತಪ್ಪೇನಿದೆ? ಎಂದು ಸುರ್ಜೇವಾಲ ಅವರಿ ಸಿದ್ದರಾಮಯ್ಯರಿಗೆ ಬೆಂಬಲ ಸೂಚಿಸಿದ್ದಾರೆ. ಬೊಮ್ಮಾಯಿ ಅವರು ತಾವೊಬ್ಬರೆ ಇಡೀ ಲಿಂಗಾಯತ ಸಮಾಜದ ಪ್ರತೀಕ ಎಂಬ ಭ್ರಮೆಯಿಂದ ಹೊರಬರಬೇಕು.
ಬೊಮ್ಮಾಯಿ ಅವರು ತಮ್ಮ 40% ಕಮಿಷನ್ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕಳಂಕ ತಂದಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲ್ ಸೇರಿದಂತೆ ರಾಜ್ಯದ ಪ್ರಮುಖ ಮುಖ್ಯಮಂತ್ರಿಗಳು ತಮ್ಮ ಸಮುದಾಯಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಬೊಮ್ಮಾಯಿ ಅವರು ಇವರುಗಳನ್ನು ನೋಡಿ ಶೇ.1 ರಷ್ಟಾದರೂ ಕಲಿತಿದ್ದರೆ ಸಾಕಿತ್ತು. ಇಂದು ಬಸವಣ್ಣ ಜಯಂತಿ. ಬಸವಣ್ಣನ ಸಿದ್ಧಾಂತ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಂದೇ ಆಗಿದೆ. ಜಾತಿರಹಿತ ಸಮಾಜ, ಅಸಮಾನತೆ ರಹಿತ ಸಮಾಜ ನಿರ್ಮಾಣ ಬಸವಣ್ಣ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ ಎಂದು ಹೇಳಿದ್ದಾರೆ.