ಧಾರವಾಡ: ಚುನಾವಣಾ ಸಮಯದಲ್ಲಿ ನಾವು ಏನು ಭರವಸೆಗಳನ್ನು ಕೊಟ್ಟಿದ್ದೆವೋ ಅವುಗಳನ್ನು ಈಡೇರಿಸುವುದೇ ನಮ್ಮ ಗುರಿ. ಕೊಟ್ಟ ಮಾತುಗಳನ್ನು ನಾವು ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಚಿವ ಸಂತೋಷ ಲಾಡ್ (Santhosh Lad) ಹೇಳಿಕೆ ನೀಡಿದ್ದಾರೆ. ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ಗೆ (Congress) ಅಧಿಕಾರದ ಅಮಲು ಏರಿದೆ ಎಂಬ ಬಿಜೆಪಿ (BJP) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೊನ್ನೆಯಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೇವೆ.
ಒಟ್ಟಾರೆ ನಮ್ಮ ಉದ್ದೇಶ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವುದಾಗಿದೆ. ವಿಶೇಷವಾಗಿ ನಮ್ಮ ಗಮನ ಆ ಕಡೆ ಇರುತ್ತದೆ ಎಂದರು. ಕರ್ನಾಟಕದಲ್ಲಿ ಅತೀ ಶೀಘ್ರದಲ್ಲೇ ತುರ್ತು ಪರಿಸ್ಥಿತಿ ಬರುತ್ತದೆ ಬರುತ್ತದೆ ಎಂಬ ಮಾಜಿ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವ ದೃಷ್ಟಿಯಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಮುಂಬರುವ ದಿನಗಳಲ್ಲಿ ಅದಕ್ಕೆ ಉತ್ತರ ಸಿಗುತ್ತದೆ. ಸುಮ್ಮನೆ ಅವರೊಂದು ಹೇಳುವುದು ನಾವೊಂದು ಹೇಳುವುದು ಬೇಡ. ಬೊಮ್ಮಾಯಿ ಅವರು ಬಡತನ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದು ಒಳ್ಳೆಯದು ಎಂದು ಹೇಳಿದರು.