ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಪುತ್ರಿ ನಟಿ ಜಾನ್ವಿ ಕಪೂರ್ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ ಬಳಿಕ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿರುವ ಜಾನ್ವಿ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ. ಆದರೆ ಜಾನ್ವಿ ಮನಸ್ಸು ಗೆದ್ದಿರೋದು ಶಿಖರ್ ಪಹಾರಿಯಾ. ಇದೀಗ ಮಗಳ ಬಾಯ್ ಫ್ರೆಂಡ್ ಬಗ್ಗೆ ಬೋನಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಬೋನಿ ಕಪೂರ್, ‘ನನಗೆ ಶಿಖರ್ ಅಂದರೆ ಪ್ರೀತಿ. ಜಾನ್ವಿ ಅವನ ಜೊತೆ ಕಾಣಿಸಿಕೊಳ್ಳದೇ ಇರುವಾಗಲೂ ನನಗೆ ಅವರ ಜೊತೆ ಒಳ್ಳೆಯ ಫ್ರೆಂಡ್ಶಿಪ್ ಇತ್ತು. ಅವರು ಎಂದಿಗೂ ನನ್ನ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಯಾವುದಾದರೂ ಸಹಾಯ ಬೇಕಾದರೆ ಅವರು ಯಾವಾಗಲೂ ಓಡಿ ಬರುತ್ತಾರೆ. ಅವರು ನನ್ನೊಂದಿಗೆ, ಜಾನ್ವಿ ಮತ್ತು ಅರ್ಜುನ್ ಅವರೊಂದಿಗೆ ಒಳ್ಳೆಯ ಸ್ನೇಹ ಹೊಂದಿದ್ದಾರೆ. ಹಾಗಾಗಿ ಅವರಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಸಿಕ್ಕಿರುವುದು ನಮ್ಮ ಅದೃಷ್ಟ’ ಎಂದು ಹೇಳಿದ್ದಾರೆ.
ಜಾನ್ವಿ ಕಪೂರ್ ಅವರು ಶಿಖರ್ ಜೊತೆಗಿನ ಸಂಬಂಧವನ್ನು ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಅವರು ಆಗಾಗ ಡಿನ್ನರ್ ಡೇಟ್ಗೆ ತೆರಳುತ್ತಾ ಇರುತ್ತಾರೆ. ಇವರು ಒಟ್ಟಾಗಿ ಪಾರ್ಟಿ ಮಾಡುತ್ತಾರೆ. ವಿದೇಶಕ್ಕೂ ಒಟ್ಟಾಗಿ ತೆರಳಿದ್ದೂ ಇದೆ. ಇತ್ತೀಚೆಗೆ ಜಾನ್ವಿ ಕಪೂರ್ ಅವರು ತಿರುಪತಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಜಾನ್ವಿ ಕಪೂರ್ ಜೊತೆ ಶಿಖರ್ ಕೂಡ ಇದ್ದಾರೆ. ಕೇವಲ ಜಾನ್ವಿಗೆ ಮಾತ್ರವಲ್ಲದೆ ಅವರ ತಂದೆ ಬೋನಿ ಕಪೂರ್ಗೂ ಶಿಖರ್ ಸಖತ್ ಇಷ್ಟ ಆಗಿದ್ದಾರೆ.
ಶಿಖರ್ ಪಹಾರಿಯಾ ಮಹಾರಾಷ್ಟ್ರ ಮಾಜಿ ಸಿಎಂ ಸುಶಿಲ್ ಕುಮಾರ್ ಶಿಂದೆ ಅವರ ಮೊಮ್ಮೊಗ. ಶಿಖರ್ ಹಾಗೂ ಜಾನ್ವಿ ಅವರು ಪ್ರೀತಿಯಲ್ಲಿ ಇದ್ದರು. ನಂತರ ಬ್ರೇಕಪ್ ಆಯಿತು. ನಂತರ ಇಬ್ಬರೂ ಪ್ಯಾಚಪ್ ಮಾಡಿಕೊಂಡಿದ್ದು ಇದೀಗ ಮತ್ತೆ ಡೇಟಿಂಗ್ ನಲ್ಲಿದ್ದಾರೆ. ಬೋನಿ ಕಪೂರ್ ಜೊತೆಗೂ ಶಿಖರ್ ಆಗಾಗ ಕಾಣಿಸಿಕೊಳ್ಳುತ್ತಿದ್ದು ಈ ಮೂಲಕ ಬೋನಿ ಮಗಳ ಪ್ರೀತಿಯನ್ನು ಇನ್ ಡೈರೆಕ್ಟ್ ಆಗಿ ಒಪ್ಪಿಕೊಂಡಿದ್ದಾರೆ.