ಬಾಲಿವುಡ್ ನಿರ್ಮಾಪಕ, ದಿವಂಗತ ಶ್ರೀದೇವಿ ಪತಿ ಬೋನಿ ಕಪೂರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬೋನಿ ಕಪೂರ್ ಪುತ್ರಿ ಜಾನ್ವಿ ಕಪೂರ್ ಈಗಾಗಲೇ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್ ಜೊತೆಗೆ ದಕ್ಷಿಣ ಭಾರತರದ ಸ್ಟಾರ್ ನಟರ ಸಿನಿಮಾಗಳಲ್ಲೂ ಜಾನ್ವಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬೋನಿ ಕಪೂರ್ ಕಿರಿಯ ಮಗಳು ಚಿತ್ರರಂಗಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದು ಮಗಳ ಚಿತ್ರಕ್ಕೆ ಬೋನಿ ಕಪೂರ್ ಹಣ ಹೂಡಲು ಮುಂದಾಗಿದ್ದಾರೆ.
ಖುಷಿ ಕಪೂರ್ಗಾಗಿ ‘ಉಪ್ಪೆನಾ’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಬೋನಿ ಕಪೂರ್ ಉತ್ಸಾಹ ತೋರಿಸಿದ್ದಾರೆ. ಈ ವಿಷಯ ಕೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಬೋನಿ ಕಪೂರ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಲು ಕಾರಣ ಕೂಡ ಇದೆ. ಯಾಕೆಂದರೆ, ‘ಉಪ್ಪೆನಾ’ ಸಿನಿಮಾದ ಕಥೆ ‘ಧಡಕ್’ ಚಿತ್ರದ ಕಥೆಯ ರೀತಿಯೇ ಇದೆ. ಇನ್ನು, ‘ಧಡಕ್’ ಸಿನಿಮಾವು ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್. ‘ಉಪ್ಪೆನಾ’ ಕ್ಲೈಮ್ಯಾಕ್ಸ್ನಲ್ಲಿ ಬರುವ ಕೆಲವು ದೃಶ್ಯಗಳನ್ನು ಹೊರತುಪಡಿಸಿ ಬಹುತೇಕ ಕಥೆ ಅದೇ ರೀತಿ ಇತ್ತು. ಈಗ ಬಾಲಿವುಡ್ನಲ್ಲಿ ‘ಉಪ್ಪೆನಾ’ ರಿಮೇಕ್ ಮಾಡಿದರೆ ಹಿಂದಿ ಪ್ರೇಕ್ಷಕರು ಮತ್ತೆ ಅದೇ ಚಿತ್ರ ನೋಡಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
‘ದಿ ಆರ್ಚೀಸ್’ ಸಿನಿಮಾದ ಮೂಲಕ ಖುಷಿ ಕಪೂರ್ ಬಾಲಿವುಡ್ಗೆ ಕಾಲಿಟ್ಟರು. ಆ ಸಿನಿಮಾ ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಯಿತು. ಶ್ರೀದೇವಿ ಮಗಳು ಎಂಬ ಕಾರಣಕ್ಕೆ ಅವರಿಗೆ ಜನಪ್ರಿಯತೆ ಸಿಗುತ್ತಿದೆ. ಮಗಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಬೋನಿ ಕಪೂರ್ ಪ್ರಯತ್ನಿಸುತ್ತಿದ್ದಾರೆ.
ರಾಮ್ ಚರಣ್ ನಟನೆಯ 16ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು. ಆ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ದಕ್ಷಿಣದಲ್ಲಿ ‘ದೇವರ’ ಬಳಿಕ ಜಾನ್ವಿ ಕಪೂರ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಬುಚ್ಚಿ ಬಾಬು ಸನಾ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಉಪ್ಪೆನಾ’ ಸಿನಿಮಾಗೆ ನಿರ್ದೇಶನ ಮಾಡಿದ್ದು ಕೂಡ ಬುಚ್ಚಿ ಬಾಬು ಸನಾ. ಅವರ ಪ್ರತಿಭೆಗೆ ಬೋನಿ ಕಪೂರ್ ಅವರು ಫಿದಾ ಆಗಿದ್ದಾರೆ. ಹೀಗಾಗಿ ಮಗಳಿಗಾಗಿ ಉಪ್ಪೆನಾ ಸಿನಿಮಾ ರಿಮೇಕ್ ಮಾಡಲು ಬೋನಿ ಉತ್ಸಾಹ ತೋರಿಸಿದ್ದಾರೆ.