ನವದೆಹಲಿ: ದೆಹಲಿಯ ಟೆಕ್ಕಿಯೊಬ್ಬರಿಗೆ (Delhi Techie) ಆರ್ಡರ್ ಮಾಡಿದ್ದ ಪ್ರಾಡಕ್ಟ್ 4 ವರ್ಷಗಳ ಬಳಿಕ ಡೆಲಿವರಿ ಆಗಿರುವ ಅಚ್ಚರಿದಾಯಕ ಘಟನೆ ನಡೆದಿದೆ. ದೆಹಲಿ ಮೂಲದ ಟೆಕ್ಕಿ ನಿತಿನ್ ಅಗರ್ವಾಲ್ ಅವರು 2019ರ ಸಂದರ್ಭದಲ್ಲಿ ಅಲಿ ಎಕ್ಸ್ಪ್ರೆಸ್ ಸೈಟ್ ಮೂಲಕ ಪ್ರಾಡಕ್ಟ್ವೊಂದನ್ನು ಆರ್ಡರ್ ಮಾಡಿದ್ದರು. ಅದು 2023 ಅಂದರೆ ನಾಲ್ಕು ವರ್ಷದ ಬಳಿಕ ಡೆಲಿವರಿ ಆಗಿದೆ. ಆನ್ಲೈನ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಲಿ ಎಕ್ಸ್ಪ್ರೆಸ್ (AliExpress) ಈಗ ಭಾರತದಲ್ಲಿ ಬ್ಯಾನ್ ಆಗಿದೆ.
ಇತರೆ 58 ಆ್ಯಪ್ಗಳ ಜೊತೆಗೆ ಇದನ್ನೂ ಭಾರತ ಸರ್ಕಾರ ಬ್ಯಾನ್ ಮಾಡಿತ್ತು. ಈ ಸೈಟ್ ಬ್ಯಾನ್ ಆಗುವ ಮುನ್ನವೇ ಟೆಕ್ಕಿ ಆರ್ಡರ್ ಮಾಡಿದ್ದರು ಎಂಬುದು ತಿಳಿದುಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟೆಕ್ಕಿ ಪೋಸ್ಟ್ವೊಂದನ್ನು ಹಾಕಿದ್ದಾರೆ. ʼಎಂದಿಗೂ ಭರವಸೆ ಕಳೆದುಕೊಳ್ಳಬೇಡಿ.. ಅಲಿ ಎಕ್ಸ್ಪ್ರೆಸ್ನಲ್ಲಿ ನಾನು 2019ರಲ್ಲಿ ಆರ್ಡರ್ ಮಾಡಿದ್ದ ಪ್ರಾಡಕ್ಟ್ ಕೊನೆಗೂ ಇಂದು ನನ್ನ ಕೈ ಸೇರಿದೆʼ ಎಂದು ಬರೆದುಕೊಂಡಿದ್ದಾರೆ. ದೆಹಲಿ ಟೆಕ್ಕಿಯ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.