ಮುಂಬೈನಲ್ಲಿನ ಹುಕ್ಕಾ ಬಾರ್, ಹುಕ್ಕಾ ಪಾಪ್ಯೂಲರ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಸೇರಿದಂತೆ ಇನ್ನೂ 14 ಮಂದಿಯನ್ನು ಬಂಧಿಸಿದ್ದರು. ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿದ್ದಾರೆ.
ಮಂಗಳವಾರ ರಾತ್ರಿ ಹುಕ್ಕಾ ಪಾಪ್ಯೂಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ವೇಳೆ ಬಿಗ್ಬಾಸ್ ಹಿಂದಿ ಸೀಸನ್ 17ರ ವಿಜೇತ, ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಸಹ ಸ್ಥಳದಲ್ಲಿದ್ದರು. ಅವರನ್ನೂ ಸೇರಿದಂತೆ ಅಲ್ಲಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ದಾಳಿಯ ವೇಳೆ 13,500 ಮೌಲ್ಯದ ಹುಕ್ಕಾ ಪಾಟ್ಗಳು, 4500 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸಿದಾಗ ಹಲವಾರು ಮಂದಿ ಸಿಗರೇಟು ಹಾಗೂ ಹುಕ್ಕಾ ಸೇವನೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಜಾಮೀನು ನೀಡಲು ಅವಕಾಶವಿದ್ದ ಕಾರಣ ಅವರನ್ನು ಆ ನಂತರ ಬಿಟ್ಟು ಕಳುಹಿಸಿದ್ದಾರೆ.
ಮುನಾವರ್ ಫಾರೂಖಿ ಜನಪ್ರಿಯ ಸ್ಟಾಂಡಪ್ ಕಮಿಡಿಯನ್. ಕೆಲ ವರ್ಷಗಳ ಹಿಂದೆ ಮುನಾವರ್ ಫಾರೂಖಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಗ್ಗೆ ಅವಹೇಳನಕಾರಿ ಜೋಕ್ ಒಂದನ್ನು ಶೋನಲ್ಲಿ ಹೇಳಿದ್ದಾರೆಂಬ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಮುನಾವರ್ ಬಂಧನ ಭಾರಿ ಸುದ್ದಿಯಾಗಿತ್ತು. ಆ ಬಳಿಕ ಕೆಲವು ರಾಜ್ಯಗಳಲ್ಲಿ ಅವರ ಸ್ಟಾಂಡಪ್ ಕಾಮಿಡಿ ಶೋಗಳು ರದ್ದಾಗಿದ್ದವು. ಬಳಿಕ ಮುನಾವರ್ ಕಂಗನಾ ನಡೆಸಿಕೊಟ್ಟ ‘ಲಾಕ್ಅಪ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗೆದ್ದರು. ಬಳಿಕ ಬಿಗ್ಬಾಸ್ ಹಿಂದಿ ಸೀಸನ್ 17ರಲ್ಲಿ ಭಾಗವಹಿಸಿ ವಿಜೇತರಾಗಿದ್ದರು.