ಬೆಂಗಳೂರು:- ಬ್ರ್ಯಾಂಡ್ ಬೆಂಗಳೂರು ಕಟ್ಟುತ್ತೇವೆ ಎಂಬ ಬಡಾಯಿ ಕೊಚ್ಚಿಕೊಳ್ಳದೆ ನೀರು ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಅಶೋಕ ಸಲಹೆ ನೀಡಿದ್ದಾರೆ
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ‘ಬೇಸಿಗೆ ಆರಂಭಕ್ಕೂ ಮೊದಲೇ ನೀರಿಗೆ ಹಾಹಾಕಾರ ಆರಂಭವಾಗಿದೆ.
ತಮ್ಮ ಐಎನ್ಡಿಐಎ ಮಿತ್ರ ಪಕ್ಷವಾದ ಡಿಎಂಕೆ ಜತೆ ಸ್ನೇಹ ಉಳಿಸಿಕೊಳ್ಳಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ತಮಿಳುನಾಡಿಗೆ ನೀರು ಹರಿಸಲಾಗಿದೆ. ಹಾಗಾಗಿ, ಬೆಂಗಳೂರಿಗೆ ನೀರಿನ ಕೊರತೆ ಎದುರಾಗಿದ್ದು, ಟ್ಯಾಂಕರ್ ಮೂಲಕ ಪೂರೈಸುವ ಸ್ಥಿತಿ ಒದಗಿದೆ’ ಎಂದು ದೂರಿದ್ದಾರೆ.
‘ಬರ ಪರಿಸ್ಥಿತಿಯಿಂದ ಬೆಂಗಳೂರು ನಗರದ ನೀರಿನ ಸಮಸ್ಯೆ ಕುರಿತು ಮೊದಲೇ ಅಂದಾಜಿಸಬೇಕಿತ್ತು. ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಲು, ಹಳೇ ಕೊಳವೆ ಬಾವಿಗಳ ಮರುಪೂರಣಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಮಾಡದ ಕಾರಣ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ’ ಎಂದು ಹೇಳಿದ್ದಾರೆ.
‘ಆಡಳಿತದ ಚುಕ್ಕಾಣಿಯನ್ನು ಸಂಪೂರ್ಣವಾಗಿ ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ನೆರೆ ರಾಜ್ಯಗಳ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಾ ಕಾಲಹರಣ ಮಾಡಿದ್ದಾರೆ. ಈಗಲಾದರೂ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಎಚ್ಚೆತ್ತುಕೊಳ್ಳಬೇಕು’ ಎಂದಿದ್ದಾರೆ.