ಬ್ರೆಜಿಲ್ನ ಪ್ರಯಾಣಿಕ ವಿಮಾನವೊಂದು ಪತನಗೊಂಡಿದ್ದು ಪರಿಣಾಮ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 61 ಜನ ಸಾವನ್ನಪ್ಪಿದ್ದಾರೆ.
ಬ್ರೆಜಿಲ್ನ ಸಾವೋ ಪಾಲೋದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್ನ ಪ್ರಾದೇಶಿಕ ವಿಮಾನಯಾನ ಸಂಸ್ಥೆ ವೊಯಿಪಾಸ್ಗೆ ಸೇರಿದ ವಿಮಾನ ಇದಾಗಿದ್ದು, ವಿಮಾನ ಪತನಗೊಳ್ಳುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾವೋ ಪಾಲೋದ ವಿನ್ಹೆದೊ ಎಂಬಲ್ಲಿ ಪತನಗೊಂಡ ವಿಮಾನ ಬಳಿಕ ಜನವಸತಿ ಪ್ರದೇಶದಲ್ಲಿ ಬಿದ್ದಿದೆ. ವಿಮಾನ ಪತನಗೊಂಡು ರಭಸಕ್ಕೆ ಸ್ಥಳೀಯ ಕಂಡೋಮಿನಿಯಂ ಸಂಕೀರ್ಣದ ಮೇಲೆ ಬಿದ್ದಿದ್ದು, ಇದರಿಂದ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಆದರೆ ಈ ಘಟನೆಯಲ್ಲಿ ಕಟ್ಟಡದಲ್ಲಿದ್ದ ಯರಿಗೂ ಹಾನಿಯಾಗಿಲ್ಲ. ಎರಡು ಇಂಜಿನ್ಗಳನ್ನು ಹೊಂದಿದ್ದ ಈ ವಿಮಾನ ದಕ್ಷಿಣ ಬ್ರೆಜಿಲ್ನ ರಾಜ್ಯವಾದ ಪರನಾದ ಕಸ್ಕವೆಲ್ ನಗರದಿಂದ ಟೇಕಾಫ್ ಆಗಿತ್ತು. ಕಸ್ಕವೆಲ್ನಿಂದ ಇದು ಬ್ರೆಜಿಲ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾವೋ ಪಾಲೋದತ್ತ ಆಗಮಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, 61 ಜನರ ಸಾವಿಗೆ ವಿಷಾದ ವ್ಯಕ್ತಪಡಿಸಿದೆ. ವಿಮಾನ 2283ರಲ್ಲಿದ್ದ ಎಲ್ಲಾ 61 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ವಿಮಾನದಲ್ಲಿ ಒಟ್ಟು 57 ಪ್ರಯಾಣಿಕರು ಹಾಗೂ ನಾಲ್ವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು. ಅಲ್ಲದೇ ಘಟನೆ ಬಗ್ಗೆ ತನಿಖೆ ನಡೆಸುವ ತನಿಖಾ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.