ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆ ಮಾಡಲಾಗಿದ್ದ ಹೆಡ್ಗೆವಾರ್, ವೀರ ಸಾವರ್ಕರ್ ಪಠ್ಯಕ್ಕೆ ಬ್ರೇಕ್ ಹಾಕಿದ್ದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಸಂಪುಟ ಸಭೆಯ ಬಳಿಕ ಈ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 6 ರಿಂದ ಹತ್ತನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು
ಬಿಜೆಪಿ ಅವಧಿಯಲ್ಲಿ ಪರಿಷ್ಕರಣೆ ಮಾಡಿದ ಪಠ್ಯ ಈಗಾಗಲೇ ಮಕ್ಕಳ ಕೈಗೆ ಹೋಗಿದೆ. ಮತ್ತೆ ಪ್ರಿಂಟ್ ಮಾಡಲು ಅಗಲ್ಲ. ಖರ್ಚು ಜಾಸ್ತಿ ಅಗುತ್ತದೆ. ಈ ಹಿನ್ನಲೆಯಲ್ಲಿ ಪಠ್ಯದಲ್ಲಿ ಯಾವುದು ಅವಶ್ಯಕತೆ ಇಲ್ಲ ಅದನ್ನು ತೆಗೆದಿದ್ದೇವೆ. ಯಾವುದು ಸೇರ್ಪಡೆ ಮಾಡಬೇಕು ಅದನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಇದಕ್ಕಾಗಿ ಐದು ಜನರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಆರಂಭದಲ್ಲಿ 45 ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಅದರೆ ಇದೀಗ ಸಾವಿತ್ರಿ ಭಾಯಿ ಪುಲೆ ಪಾಠ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.
ಅಂಬೇಡ್ಕರ್ ಕುರಿತಾದ ಕವನ ಸೇರ್ಪಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಜವಹರಲಾಲ್ ನೆಹರೂ ಅವರು, ಪುತ್ರಿ ಇಂದಿರಾ ಗಾಂಧಿಗೆ ಬರೆದ ಪತ್ರವನ್ನು ಪಠ್ಯ ವಾಗಿ ಸೇರ್ಪಡೆ ಮಾಡಲಾಗಿದೆ.
ಹೆಡ್ಗೆವಾರ್ ಪಾಠದ ಜೊತೆಗೆ ಚಕ್ರವರ್ತಿ ಸೂಲಿಬೆಲೆ ಬರೆದ ಪಠ್ಯಕ್ಕೂ ಕೊಕ್ ಕೊಡಲಾಗಿದೆ ಎಂದರು. ಪಠ್ಯ ಪರಿಷ್ಕರಣೆ ಮಾಡಲು ಮುಂದಿನ 15 ದಿನಗಳಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.