ನಾವು ಚಳಿಗಾಲದ ತಿಂಗಳುಗಳಿಗೆ ಕಾಲಿಡುತ್ತಿದ್ದಂತೆ, ನಮ್ಮ ಪಾದಗಳು ದಪ್ಪ ಸಾಕ್ಸ್ ಮತ್ತು ಬೂಟುಗಳೊಳಗೆ ಕಣ್ಮರೆಯಾದಾಗ ನಾವು ಅವುಗಳ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ನಾವು ಅರಿತುಕೊಳ್ಳದ ಸಂಗತಿಯೆಂದರೆ, ಶೀತವು ನಮ್ಮ ಪಾದಗಳನ್ನು ಒಣಗಿಸುತ್ತದೆ,ಪಾದಗಳ ಬಗ್ಗೆ ಸರಿಯಾದ ಕೇರ್ ತೆಗೆದುಕೊಳ್ಳದೇ ಇದ್ದರೆ ಪಾದ ಅಥವಾ ಹಿಮ್ಮಡಿ ಬಿರುಕು ಬಿಟ್ಟು ರಕ್ತಸ್ರಾವವಾಗುತ್ತದೆ.
ಅದಲ್ಲದೆ ಚಳಿಗಾಲದ ಹಾಗೆ ಬೇಸಿಗೆಯಲ್ಲಿ ಕೂಡ ಹಿಮ್ಮಡಿಗಳು ಒಡೆಯುತ್ತವೆ. ಒಡೆದ ಹಿಮ್ಮಡಿಯಿಂದ ಅನೇಕ ಬಾರಿ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಕೆಲವರಿಗಂತೂ ಹಿಮ್ಮಡಿ ಒಡೆದು ರಕ್ತ ಕೂಡ ಬರುತ್ತದೆ. ಹಿಮ್ಮಡಿಗಳು ಹೀಗೆ ಬಿರುಕು ಬಿಟ್ಟಾಗ ನಡೆದಾಡಲು ಕೂಡ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಹಿಮ್ಮಡಿ ಏಕೆ ಒಡೆಯುತ್ತದೆ ಹಾಗೆ ಒಡೆಯುವುದನ್ನು ತಪ್ಪಿಸಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ
ಬೇಸಿಗೆಯಲ್ಲಿ ಹಿಮ್ಮಡಿ ಒಡೆಯಲು ಇದು ಕಾರಣ :
• ಬೇಸಿಗೆಯಲ್ಲಿ ವಿಟಮಿನ್ ಕೊರತೆಯಿಂದ ಹಿಮ್ಮಡಿಗಳು ಒಡೆಯುತ್ತದೆ. ಶರೀರದಲ್ಲಿ ವಿಟಮಿನ್ ಸಿ, ವಿಟಮಿನ್ ಬಿ3 ಮತ್ತು ವಿಟಮಿನ್ ಇ ಗಳ ಕೊರತೆಯಿಂದ ಚರ್ಮ ಶುಷ್ಕವಾಗುತ್ತದೆ. ಚರ್ಮ ಹೆಚ್ಚು ಒಣಗುವುದರಿಂದ ಹಿಮ್ಮಡಿ ಒಡೆಯುತ್ತದೆ.
• ಬೇಸಿಗೆಯಲ್ಲಿ ಮೈ ಹೆಚ್ಚು ಬೆವರುವುದರಿಂದ ಶರೀರ ಡೀ ಹೈಡ್ರೇಟ್ ಆಗುತ್ತದೆ. ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಶರೀರ ಒಣಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚರ್ಮವನ್ನು ತೇವಗೊಳಿಸಬೇಕಾಗುತ್ತದೆ.
• ಬೇಸಿಗೆಯಲ್ಲಿ ಚಪ್ಪಲಿ ಧರಿಸದೇ ಓಡಾಡುವುದರಿಂದಲೂ ಹಿಮ್ಮಡಿ ಒಡೆಯುತ್ತದೆ. ಚಳಿಗಾಲದಲ್ಲಿ ಕಾಲು ತಣ್ಣಗಾಗುತ್ತದೆ ಎಂಬ ಕಾರಣಕ್ಕೆ ಚಪ್ಪಲಿ ಧರಿಸಿ ಓಡಾಡುತ್ತಾರೆ. ಆದರೆ ಬೇಸಿಗೆಯಲ್ಲಿ ವಿಪರೀತ ಸೆಕೆ ಇರುವುದರಿಂದ ಹಲವು ಮಂದಿ ಬರಿಗಾಲಲ್ಲಿ ನಡೆಯುತ್ತಾರೆ. ಹೀಗೆ ಮಾಡುವುದರಿಂದ ಹಿಮ್ಮಡಿಗೆ ಧೂಳು, ಮಣ್ಣು ಸೇರಿಕೊಂಡು ಹಿಮ್ಮಡಿ ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ಒಡೆದ ಹಿಮ್ಮಡಿಗಳ ರಕ್ಷಣೆ ಹೀಗೆ ಮಾಡಿ :
• ಬೇಸಿಗೆಯಲ್ಲಿ ಒಡೆದ ಹಿಮ್ಮಡಿಗಳನ್ನು ಕಾಪಾಡಿಕೊಳ್ಳಲು ರಾತ್ರಿ ಮಲಗುವ ಮುನ್ನ ಬಿಸಿಯಾದ ನೀರಿನಲ್ಲಿ ಹಿಮ್ಮಡಿಗಳನ್ನು ಇರಿಸಿಕೊಳ್ಳಿ. ಬಿಸಿ ನೀರಿಗೆ ಉಪ್ಪು ಬೆರೆಸಿದರೆ ಇನ್ನೂ ಹೆಚ್ಚಿನ ಪರಿಣಾಮ ಸಿಗುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಇನ್ಫೆಕ್ಷನ್ ಕೂಡ ದೂರವಾಗುತ್ತದೆ. ಸ್ವಲ್ಪ ಸಮಯ ನೀರಿನಲ್ಲಿ ಇಟ್ಟು ನಂತರ ಕಾಲನ್ನು ಚೆನ್ನಾಗಿ ಒಣಗಿಸಿ ನಂತರ ಗ್ಲಿಸರಿನ್, ಲ್ಯಾಕ್ಟಿಕ್ ಎಸಿಡ್ ಹೊಂದಿರುವ ಫೂಟ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ. ಇದರಿಂದ ತ್ವಚೆ ಒಣಗುವುದು ನಿಲ್ಲುತ್ತದೆ.
• ಒಡೆದ ಹಿಮ್ಮಡಿಗಳಿಗೆ ಪೆಟ್ರೊಲಿಯಮ್ ಜೆಲ್ಲಿ ಉತ್ತಮ ಔಷಧವಾಗಿದೆ. ರಾತ್ರಿ ಮಲಗುವ ಮುನ್ನ ಕಾಲನ್ನು ಚೆನ್ನಾಗಿ ತೊಳೆದು ಪೆಟ್ರೊಲಿಯಮ್ ಜೆಲ್ ಗೆ ಅಲೊವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಲೇಪಿಸಿಕೊಂಡರೆ ಹಿಮ್ಮಡಿಗಳು ನಯವಾಗುತ್ತದೆ.
• ಯಾವುದೇ ಸಸ್ಯಜನ್ಯ ಎಣ್ಣೆಗೆ ಮೆಂತ್ಯವನ್ನು ಸೇರಿಸಿ ಬಿಸಿಮಾಡಿ. ಎಣ್ಣೆ ತಣ್ಣಗಾದ ನಂತರ ಅದನ್ನು ಹಿಮ್ಮಡಿಗೆ ಹಚ್ಚುವುದರಿಂದ ಒಡಕು ದೂರವಾಗುತ್ತದೆ.
• ಹಿಮ್ಮಡಿಯ ಒಡಕನ್ನು ನಿವಾರಿಸಲು ತೆಂಗಿನ ಎಣ್ಣೆಯ ಜೊತೆ ಅಲೊವೆರಾ ಜೆಲ್ ಅನ್ನು ಮಿಶ್ರಣ ಮಾಡಿ ಹಚ್ಚಬೇಕು.
• ಹಿಮ್ಮಡಿ ಒಡೆಯದೇ ಇರಲು ಆಗಾಗ ನೀರಿಗೆ ಉಪ್ಪು, ನಿಂಬೆ ರಸ ಹಾಗೂ ರೋಸ್ ವಾಟರ್ ಅನ್ನು ಹಾಕಿ ನಿಮ್ಮ ಕಾಲನ್ನು 10-15 ನಿಮಿಷಗಳ ಕಾಲ ಅದರೊಳಗೆ ಇಟ್ಟುಕೊಳ್ಳಬೇಕು.