ಎದೆಹಾಲಿನ ಮೂಲಕ ಶಿಶುವಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುವುದು ಪ್ರತಿ ಅಮ್ಮನ ಕರ್ತವ್ಯ ಕೂಡ. ತಾಯಿ ಮತ್ತು ಮಗುವಿನ ಕ್ಷೇಮಕ್ಕಾಗಿ ಹಾಲೂಡುವುದು ಅತಿ ಮುಖ್ಯ. ಹಾಗೆಯೇ, ಈ ಸಮಯದಲ್ಲಿ ಆಹಾರ ಸೇವನೆಯಲ್ಲಿ ಕೆಲವು ಕಟ್ಟುನಿಟ್ಟು, ಕೆಲವು ಆಹಾರಗಳ ಸೇವನೆ ಮಾಡುವುದು ಅತಿ ಅಗತ್ಯ. ತಾಯಿ ಏನು ಬೇಕೋ ಅದನ್ನು ತಿನ್ನುವಂತಿಲ್ಲ. ಕೆಲವು ಬಾಣಂತಿಯರು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ, ಮೊದಲಿನಂತೆಯೇ ಏನಾದರೂ ತಿನ್ನುತ್ತಾರೆ
ಹಾಗೆಯೇ, ಕೆಲವು ಪ್ರದೇಶಗಳಲ್ಲಿ ಬಾಣಂತಿಯರಿಗೆ ಅತಿಯಾದ ಕಟ್ಟುನಿಟ್ಟು ಮಾಡಿ, ಪೌಷ್ಟಿಕಾಂಶಯುಕ್ತ ಆಹಾರವೇ ದೊರೆಯದಂತೆ ಮಾಡಲಾಗುತ್ತದೆ. ಇವೆರಡೂ ತಪ್ಪು. ಹಾಲೂಡುವ ಸಮಯದಲ್ಲಿ ನಿಯಮಿತ, ಸಮತೋಲಿತ ಆಹಾರ ಸೇವನೆ ಮಾಡುವುದು ಅತಿ ಅಗತ್ಯ. ಕೆಲವು ಆಹಾರಗಳನ್ನು ಈ ಸಮಯದಲ್ಲಿ ಸೇವನೆ ಮಾಡುವುದು ಉತ್ತಮ.
ಬಾಣಂತಿಗೆ ಓಟ್ಸ್ ಯಾಕೆ ಎನಿಸಬಹುದು. ಇದು ಅತ್ಯುತ್ತಮವಾದ ಸೂಪರ್ ಫುಡ್. ನಾರಿನಂಶ, ಕಬ್ಬಿಣಾಂಶದಿಂದ ಕೂಡಿರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಮತ್ತು ಇದು ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಸಹಕಾರಿ.
ಪಾಲಕ್, ಪುದೀನಾ, ಸಬ್ಬಕ್ಕಿ ಸೇರಿದಂತೆ ಕೆಲವು ರೀತಿಯ ಹಸಿರು ಸೊಪ್ಪುಗಳು ಆಹಾರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇವುಗಳಲ್ಲಿ ವಿಟಮಿನ್ ಎ, ಸಿ, ಕೆ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇರುತ್ತವೆ.
ಬಾದಾಮಿ, ವಾಲ್ ನಟ್ ಒಣಹಣ್ಣುಗಳು, ಅಗಸೆ ಮತ್ತು ಕಾಮಕಸ್ತೂರಿ ಬೀಜಗಳನ್ನು ಸೇವಿಸಬೇಕು. ಇವುಗಳಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ. ಪ್ರೊಟೀನ್ ಮತ್ತು ಅಗತ್ಯ ಖನಿಜಾಂಶಗಳಿರುತ್ತವೆ. ಆಪ್ರಿಕಾಟ್, ಖರ್ಜೂರ, ಒಣದ್ರಾಕ್ಷಿಗಳನ್ನು ಸಹ ಬಳಕೆ ಮಾಡಬೇಕು. ಇವುಗಳಿಂದ ಬಾಣಂತಿಗೆ ಅನೀಮಿಯಾ ಉಂಟಾಗುವುದಿಲ್ಲ.
ಹಾಲೂಡುವ ತಾಯಂದಿರು ಮಾಂಸಾಹಾರಿಗಳಾಗಿದ್ದರೆ ಫ್ಯಾಟಿ ಫಿಶ್ ಸೇವನೆ ಮಾಡಬಹುದು. ಸಾಲ್ಮನ್, ಸಾರ್ಡಿನೆಸ್ ನಂತಹ ಒಮೆಗಾ 3 ಫ್ಯಾಟಿ ಆಸಿಡ್ ನಿಂದ ಕೂಡಿರುವ ಆಹಾರ ಸೇವನೆ ಮಾಡುವುದರಿಂದ ಮಗುವಿನ ಮಿದುಳಿನ ಬೆಳವಣಿಗೆಗೆ ಅನುಕೂಲ.
ಚಿಕನ್ ಸೇರಿದಂತೆ ಸಸ್ಯಾಧಾರಿತ ಟೋಫು, ಕಾಳುಗಳನ್ನು ಸೇವನೆ ಮಾಡಬೇಕು. ಇವು ಕೋಶಗಳ ರಿಪೇರಿಯಲ್ಲಿ ಪಾತ್ರ ವಹಿಸುತ್ತವೆ. ಮಾಂಸಖಂಡಗಳ ಆರೋಗ್ಯಕ್ಕೆ ಸಹಕಾರಿಯಾಗಿವೆ.