ಬೆಂಗಳೂರು : ಲಂಚ ಪಡೆಯುವ ವ್ಯಕ್ತಿ ಮಾತ್ರವಲ್ಲ ಲಂಚ ಕೊಡುವ ವ್ಯಕ್ತಿಗೂ ಶಿಕ್ಷೆ ಆಗಬೇಕು ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಮಹತ್ವದ ಆದೇಶ ಹೊರಡಿಸಿದೆ.
ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಎಂ.ವಿ. ಪ್ರಶಾಂತ್ ಕುಮಾರ್ ವಿರುದ್ಧದ ಲಂಚದ ಪ್ರಕರಣದಲ್ಲಿ ಐವರು ಆರೋಪಿಗಳ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪುತ್ರ ಪ್ರಶಾಂತ್ ಕುಮಾರ್ಗೆ ಲಂಚ ನೀಡಲು ಮುಂದಾದ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಕೋರಿ ಕರ್ನಾಟಕ ಅರೋಮಾ ಕಂಪೆನಿ ಮಾಲೀಕರಾದ ಕೈಲಾಶ್ ಎಸ್. ರಾಜ್, ವಿನಯ್ ಎಸ್. ರಾಜ್, ಚೇತನ್ ಮಾರ್ಲೇಚ, ಸಿಬ್ಬಂದಿ ಅಲ್ಬರ್ಟ್ ನಿಕೋಲಸ್ ಮತ್ತು ಗಂಗಾಧರ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಲಂಚ ಪಡೆಯುವ ವ್ಯಕ್ತಿಯ ಜೊತೆಜೊತೆಗೇ ಲಂಚ ಕೊಡುವ ವ್ಯಕ್ತಿಯನ್ನೂ ಶಿಕ್ಷೆಗೆ ಒಳಪಡಿಸಬೇಕು ಮತ್ತು ಲಂಚದ ಪ್ರವೃತ್ತಿಯನ್ನು ಬುಡಸಮೇತ ಹೊಸಕಿ ಹಾಕಲು ಇದು ಸಕಾಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.