ಇಂದಿನಿಂದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ರಷ್ಯಾದ ಕಜಾನ ನಗರದಲ್ಲಿ ‘ಬ್ರಿಕ್ಸ್’ ಶೃಂಗಸಭೆ ನಡೆಯಲಿದೆ. ಈ ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಇರಾನ್ನ ಅಧ್ಯಕ್ಷ ಡಾ.ಮಸೂದ್ ಪೆಜೆಶ್ಕಿಯಾನ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಪುಟಿನ್ ವಿರುದ್ಧ ಅಂತರರಾಷ್ಟ್ರೀಯ ಬಂಧನ ವಾರಂಟ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಪುಟಿನ್ ಶೃಂಗಸಭೆ ಆಯೋಜಿಸಿದ್ದಾರೆ ಎನ್ನಲಾಗುತ್ತಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳ ಒಕ್ಕೂಟಕ್ಕೆ ಪರ್ಯಾಯವಾಗಿ ಈ ಮಿತ್ರಕೂಟ ರಚನೆಯಾಗಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಮಾತ್ರ ಸದಸ್ಯತ್ವ ಹೊಂದಿದ್ದವು. ಈ ವರ್ಷ ಇರಾನ್, ಈಜಿಪ್ಟ್, ಇಥಿಯೋಪಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ರಾಷ್ಟ್ರಗಳು ಸೇರ್ಪಡೆಯಾಗಿದ್ದು, ಟರ್ಕಿ, ಅಜರ್ಬೈಜಾನ್, ಮಲೇಷ್ಯಾ ಕೂಡ ಔಪಚಾರಿಕವಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದು, ಇನ್ನಷ್ಟು ರಾಷ್ಟ್ರಗಳು ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿವೆ.
‘ಶೃಂಗಸಭೆಯಲ್ಲಿ 32 ರಾಷ್ಟ್ರಗಳು ಭಾಗವಹಿಸಲಿದ್ದು, 20 ರಾಷ್ಟ್ರಗಳ ಮುಖ್ಯಸ್ಥರೇ ಭಾಗವಹಿಸಲಿದ್ದಾರೆ. ಪುಟಿನ್ ಅವರ ವಿದೇಶಾಂಗ ನೀತಿಗೆ ಸಿಕ್ಕ ಅತಿ ದೊಡ್ಡ ಯಶಸ್ಸು ಇದು’ ಎಂದು ರಷ್ಯಾದ ವಿದೇಶಾಂಗ ನೀತಿಯ ಅಧಿಕಾರಿ ಯುರಿ ಉಶಾಕೋವ್ ಹೇಳಿದ್ದಾರೆ.
‘ಮಿತ್ರರಾಷ್ಟ್ರಗಳ ಮುಖ್ಯಸ್ಥರ ಜತೆ ಪುಟಿನ್ ಅವರು 20 ದ್ವಿಪಕ್ಷೀಯ ಸಭೆ ನಡೆಸಲಿದ್ದು, ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ರಷ್ಯಾ ನೆಲದಲ್ಲಿ ನಡೆಯಲಿರುವ ಅತಿ ದೊಡ್ಡ ಶೃಂಗಸಭೆ ಇದಾಗಿದೆ’ ಎಂದು ಯುರಿ ತಿಳಿಸಿದ್ದಾರೆ.
‘ಪುಟಿನ್ ಅವರನ್ನು ಒಂಟಿಯನ್ನಾಗಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಹೊರಟಿದ್ದವು. ಅವುಗಳಿಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಈ ಶೃಂಗಸಭೆಯು ವೈಯಕ್ತಿಕವಾಗಿಯೂ ಪುಟಿನ್ ಅವರಿಗೆ ಮಹತ್ವಾಗಿದೆ’ ಎಂದು ಕಾರ್ನೆಜಿ ರಷ್ಯಾ ಯುರೇಷಿಯಾ ಸೆಂಟರ್ನ ನಿರ್ದೇಶಕ ಅಲೆಕ್ಸಾಂಡರ್ ಗಬುಯೆವ್ ಹೇಳಿದ್ದಾರೆ.