ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಕಮಿಷನ್ ಪಡೆಯುತ್ತಿದ್ದಾಗ ಕೋಟ್ಯಂತರ ರೂಪಾಯಿ ಹಣದೊಂದಿಗೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿರುವಾಗ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾವ ಮುಖ ಇಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ(AAP) ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪದೇಪದೇ ಕರ್ನಾಟಕಕ್ಕೆ ಬಂದು ಚುನಾವಣಾ ಭಾಷಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವೆಂಬಂತೆ ಮಾತನಾಡುತ್ತಿದ್ದಾರೆ. ಆದರೆ ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ, ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಮತ್ತಿತರರ ವಿರುದ್ಧ ಸಾಕ್ಷಿಸಹಿತ ಕಮಿಷನ್ ಆರೋಪ ಕೇಳಿಬಂದಿದ್ದರೂ ಈ ಬಗ್ಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಮಾತನಾಡಿಲ್ಲ. ಆದರೆ ಈಗ ಅವರದ್ದೇ ಪಕ್ಷದ ಮತ್ತೊಬ್ಬ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾಗ ಸಾಕ್ಷಿಸಹಿತ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಬರೋಬ್ಬರಿ ಎಂಟು ಕೋಟಿ ರೂಪಾಯಿ ದಾಖಲೆಯಿಲ್ಲದ ನಗದು ಪತ್ತೆಯಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ತಾಕತ್ತಿದ್ದರೆ ಈ ಬಗ್ಗೆ ಪ್ರತಿಕ್ರಿಯಿಸಲಿ” ಎಂದು ಸವಾಲು ಹಾಕಿದರು.