ಬ್ರಿಟನ್: ಪ್ಯಾಲಿಸ್ತೀನ್ನ ಭಾಗವಾಗಿರುವ ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸಮರ ಸಾರಿದೆ. ಇಸ್ರೇಲ್ ವಾಯು ಸೇನೆ ನಡೆಸುತ್ತಿರುವ ನಿರಂತರ ಬಾಂಬ್ ದಾಳಿಗೆ ಸಾವಿರಾರು ಪ್ಯಾಲಿಸ್ತೀನ್ ಪ್ರಜೆಗಳು ಸಾವನ್ನಪ್ಪಿದ್ದಾರೆ. ಇಸ್ರೇಲ್ ಸೇನೆಯ ಈ ದಾಳಿ ವಿರುದ್ಧ ವಿಶ್ವಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬ್ರಿಟನ್ ದೇಶದಲ್ಲೂ ಪ್ಯಾಲಿಸ್ತೀನ್ ಪರ ಪ್ರತಿಭಟನಾ ಸಮಾವೇಶಗಳು ನಡೆಯುತ್ತಿವೆ. ಈ ಪ್ರತಿಭಟನೆ ವೇಳೆ ಪ್ಯಾಲಿಸ್ತೀನ್ ಪರ ಪ್ರತಿಭಟನಾಕಾರರು ಯಹೂದಿಗಳ ವಿರುದ್ಧ ಜಿಹಾದ್ ಘೋಷಣೆ ಮಾಡಿರೋದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬ್ರಿಟನ್ನ ಬರ್ಮಿಂಗ್ ಹ್ಯಾಮ್, ಕಾರ್ಡಿಫ್ ಹಾಗೂ ಬೆಲ್ಫೆಸ್ಟ್ನಲ್ಲಿ ಪ್ಯಾಲಿಸ್ತೀನ್ ಪರ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಈ ವೇಳೆ ಪ್ರತಿಭಟನಾಕಾರರು ಪ್ಯಾಲಿಸ್ತೀನ್ಗೆ ತಮ್ಮ ಬೆಂಬಲ ಘೋಷಣೆ ಮಾಡುವ ಜೊತೆಯಲ್ಲೇ ಇಸ್ರೇಲ್ ಹಾಗೂ ಯಹೂದಿ ಸಮುದಾಯದ ವಿರುದ್ಧ ಜಿಹಾದ್ ಘೋಷಣೆಯನ್ನೂ ಮಾಡಿದ್ದಾರೆ. ಈ ಘೋಷಣೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬ್ರಿಟನ್ ಪ್ರಧಾನಿ ರಿಷಿ ಸುನಾಕ್, ಯಹೂದಿ ವಿರೋಧಿ ಮನಸ್ಥಿತಿಯನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಯಹೂದಿಗಳ ವಿರುದ್ಧ ಜಿಹಾದ್ ಘೋಷಣೆ ಮಾಡಿರೋದು, ಬ್ರಿಟನ್ನಲ್ಲಿ ಇರುವ ಯಹೂದಿ ಸಮುದಾಯಕ್ಕೆ ದೊಡ್ಡ ಬೆದರಿಕೆಯಾಗಿದೆ ಎಂದು ಹೇಳಿರುವ ರಿಷಿ ಸುನಾಕ್, ಬ್ರಿಟನ್ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಈ ಘೋಷಣೆಗಳು ಧಕ್ಕೆ ತಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ನಾವು ಬ್ರಿಟನ್ ದೇಶದ ರಸ್ತೆಗಳಲ್ಲಿ ಯಹೂದಿಗಳ ವಿರುದ್ಧ ದ್ವೇಷಕಾರುವ ಮನಸ್ಥಿತಿಯ ಪ್ರತಿಭಟನೆಗಳನ್ನು ಕಂಡೆವು. ಯಹೂದಿಗಳ ವಿರುದ್ಧ ಜಿಹಾದ್ ಘೋಷಣೆ ಮಾಡಿರೋದು ಕೇವಲ ಯಹೂದಿ ಸಮುದಾಯಕ್ಕೆ ಬೆದರಿಕೆ ಮಾತ್ರವಲ್ಲ, ಬ್ರಿಟನ್ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಧಕ್ಕೆ ತಂದಿದೆ ಎಂದು ರಿಷಿ ಸುನಾಕ್ ಕಿಡಿ ಕಾರಿದ್ಧಾರೆ.