ಬ್ರಿಟನ್ನ ಲಿವರ್ ಪೂಲ್ ನಗರದ ಡ್ಯಾನ್ಸ್ ಸ್ಕೂಲ್ನಲ್ಲಿ ಮಕ್ಕಳು ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ್ದ ಬಾಲಕನೊಬ್ಬ ಇಬ್ಬರು ಬಾಲಕಿಯರನ್ನು ಹತ್ಯೆ ಮಾಡಿದ್ದು, 9 ವಿದ್ಯಾರ್ಥಿಗಳನ್ನು ಗಾಯಗೊಳಿಸಿದ್ದ. ಘಟನೆಯಲ್ಲಿ ಇಬ್ಬರು ವಯಸ್ಕರೂ ಕೂಡಾ ಗಾಯಗೊಂಡಿದ್ದರು. ಇದೀಗ ಈ ಘಟನೆ ಖಂಡಿಸಿ ಬ್ರಿಟನ್ ದೇಶದಾದ್ಯಂತ ಪ್ರತಿಭಟನೆಯ ಶುರುವಾಗಿದೆ.
6 ರಿಂದ 11 ವರ್ಷಗಳ ಒಳಗಿನ ಬಾಲಕ ಹಾಗೂ ಬಾಲಕಿಯರು ‘ಟೇಲರ್ ಸ್ವಿಫ್ಟ್ ಯೋಗ ಮತ್ತು ನೃತ್ಯ ಕಾರ್ಯಾಗಾರ’ದಲ್ಲಿ ಭಾಗಿಯಾಗಿದ್ದರು. ಬೇಸಿಗೆ ರಜೆ ವೇಳೆ ನಡೆಯುವ ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆವಿಶೇಷ ತರಬೇತಿ ನೀಡಲಾಗುತ್ತಿತ್ತು. ಈ ವೇಳೆ ಶಾಲೆಗೆ ಚಾಕು ಸಮೇತ ನುಗ್ಗಿದ್ದ 17 ವರ್ಷ ಬಾಲಕ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮನಬಂದಂತೆ ಇರಿದಿದ್ದ. ಘಟನೆಯಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟು ಹಲವರು ಗಾಯಗೊಂಡಿದ್ದರು. ಈ ಕೃತ್ಯದ ಹಿಂದೆ ಭಯೋತ್ಪಾದನೆಯ ಉದ್ದೇಶ ಇಲ್ಲ ಎಂದು ಪೊಲೀಸರು ಹೇಳಿದ್ದರಾದರೂ, ಬ್ರಿಟನ್ನಲ್ಲೇ ಜನಿಸಿದ್ದ ಈ ಬಾಲಕನ ಮೂಲ ಇದೀಗ ಉದ್ವಿಘ್ನತೆಗೆ ಕಾರಣವಾಗಿದೆ.
ಬಂಧಿತ ಆರೋಪಿ ಬಾಲಕ ಇಸ್ಲಾಂ ಧರ್ಮೀಯನಾಗಿದ್ದು, ಆತ ಸ್ಥಳೀಯ ಮಸೀದಿಯೊಂದಕ್ಕೆ ಭೇಟಿ ನೀಡುತ್ತಿದ್ದ ಎಂಬ ಮಾಹಿತಿ ಬ್ರಿಟನ್ನಲ್ಲಿ ಹರಿದಾಡುತ್ತಿದೆ. ಈ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿಲ್ಲವಾದರೂ ಬಲಪಂಥೀಯರು ರೊಚ್ಚಿಗೆದ್ದಿದ್ದಾರೆ. ಸ್ಥಳೀಯ ಮಸೀದಿ ಮೇಲೆ ದಾಳಿ ನಡೆಸಿದ ಬಲಪಂಥೀಯರು ತಮ್ಮ ಕೈಗೆ ಸಿಕ್ಕ ವಸ್ತುಗಳನ್ನು ಮಸೀದಿ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇಂಗ್ಲಿಷ್ ಡಿಫೆನ್ಸ್ ಲೀಗ್ ಎಂಬ ಸಂಘಟನೆ ಮುಸ್ಲಿಮರ ವಿರುದ್ಧ ಪ್ರತಿಭಟನೆ ನಡೆಸಿದೆ ಎಂದು ಬ್ರಿಟನ್ ಪೊಲೀಸರು ಮಾಹಿತಿ ನೀಡಿದ್ಧಾರೆ.